ADVERTISEMENT

ಉಡುಪಿ: ಆಸ್ಪತ್ರೆಗೆ ಬಿಡುಗಡೆಯಾದ ₹ 50 ಲಕ್ಷ ನೆರವಲ್ಲ; ಬರಬೇಕಿದ್ದ ಬಾಕಿ

ವೈಯಕ್ತಿಕ ಹಿತಾಸಕ್ತಿಗಳಿಗೆ ಬಡ ರೋಗಿಗಳಿಗೆ ತೊಂದರೆ: ಬಿಆರ್‌ಎಸ್‌ ಹೆಲ್ತ್ ಅಂಡ್ ರಿಸರ್ಚ್‌ ಇನ್‌ಸ್ಟಿಟ್ಯೂಟ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 16:17 IST
Last Updated 20 ಆಗಸ್ಟ್ 2021, 16:17 IST
ಸರ್ಕಾರಿ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಮೆಮೊರಿಯಲ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಒಳ ನೋಟ
ಸರ್ಕಾರಿ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಮೆಮೊರಿಯಲ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಒಳ ನೋಟ   

ಉಡುಪಿ: ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ಈಚೆಗೆ ಬಿಡುಗಡೆಯಾದ ₹ 50 ಲಕ್ಷ ಸರ್ಕಾರದ ನೆರವಲ್ಲ. ಬದಲಾಗಿ, ಆಸ್ಪತ್ರೆಯು ನೀಡಿದ ಎಂಸಿಎಚ್‌ ಸೇವೆಗಳಿಗೆ ಪ್ರತಿಯಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರದಿಂದ ಆಸ್ಪತ್ರೆಗೆ ಬರಬೇಕಾದ ಬಾಕಿ ಹಣ ಎಂದು ಬಿಆರ್‌ಎಸ್‌ ಹೆಲ್ತ್ ಅಂಡ್ ರಿಸರ್ಚ್‌ ಇನ್‌ಸ್ಟಿಟ್ಯೂಟ್ ಸ್ಪಷ್ಟಪಡಿಸಿದೆ.

ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಬಿಡುಗಡೆಯಾದ ₹ 50 ಲಕ್ಷವನ್ನು ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿಯ ಬಾಕಿ ವೇತನ ಪಾವತಿಗೆ ವ್ಯಯಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

2018ರ ಜ.19ರಂದು ಆಸ್ಪತ್ರೆಯು ಕಾರ್ಯಾರಂಭಮಾಡಿದ್ದು, ಇಲ್ಲಿಯವರೆಗೂ 11,496 ಹೆರಿಗೆಗಳು ನಡೆದಿವೆ. 2,02,588 ರೋಗಿಗಳು ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ಗುಣಮಟ್ಟದ ಸೇವೆಗೆ ಸಾರ್ವಜನಿಕರು ಸೇರಿದಂತೆ ಎಲ್ಲರಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ದುರದೃಷ್ಟವಶಾತ್ ಕೆಲವರು ಪೂರ್ವಾಗ್ರಹ ಪೀಡಿತರಾಗಿ ಆಸ್ಪತ್ರೆಯ ಘನತೆಗೆ ಕುಂದುಂಟು ಮಾಡುತ್ತಿದ್ದಾರೆ. ಆಸ್ಪತ್ರೆಯ ಕಾರ್ಯ ನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ವೈಯಕ್ತಿಕ ಹಿತಾಸಕ್ತಿಗೆ ಬಡ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಬಿಆರ್‌ಎಸ್‌ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.

ಸಂಪೂರ್ಣ ಲಾಭರಹಿತ ಉದ್ದೇಶದಿಂದ ಬಿಆರ್‌ಎಸ್‌ ಗ್ರೂಪ್ ಸರ್ಕಾರದೊಂದಿಗೆ ಪ್ರಾಥಮಿಕ ಹಂತದಲ್ಲಿ ಒಡಬಂಡಿಕೆ ಮಾಡಿಕೊಂಡು ದೇಶದ ಮೊದಲ ಪಿಪಿಪಿ ಮಾದರಿಯ 200 ಬೆಡ್‌ಗಳ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಿಸಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ 400 ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಿಆರ್‌ಎಸ್‌ ಸಂಸ್ಥೆಗೆ ಜಾಗ ನೀಡಿತ್ತು. ಆದರೆ, ಅಂತಿಮ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿಲ್ಲ. ಪರಿಣಾಮ ಸ್ಥಳೀಯ ಆಡಳಿತ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ ಎಂದು ಬಿಆರ್‌ಎಸ್‌ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.

ಲಾಭಕ್ಕಾಗಿ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿಲ್ಲ. ಪ್ರಸ್ತುತ ನಿರ್ಮಾಣವಾಗುತ್ತಿರುವ 400 ಬೆಡ್‌ಗಳ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಬರುವ ಲಾಭದಲ್ಲಿ, ಈಗಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮುನ್ನಡೆಸಿಕೊಂಡು ಹೋಗುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವುದನ್ನು ಹೊರತುಪಡಿಸಿ ಬಿಆರ್‌ಎಸ್‌ ಸಂಸ್ಥೆಗೆ ಯಾವುದೇ ಲಾಭ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಸರ್ಕಾರ ಅಂತಿಮ ಒಪ್ಪಂದಕ್ಕೆ ಸಹಿ ಹಾಕದ ಹಿನ್ನೆಲೆಯಲ್ಲಿ ಬಿಆರ್‌ಎಸ್‌ ಸಂಸ್ಥೆಯು ಈಚೆಗೆ ಪರಿಷ್ಕೃತ ಹೊಸ ಪ್ರಸ್ತಾವವನ್ನು ಸರ್ಕಾರದ ಮುಂದಿರಿಸಿದೆ. ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡಲು ಬಿಆರ್‌ಎಸ್‌ ಸಂಸ್ಥೆ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವೇತನ ಪಾವತಿಗೆ ಒಪ್ಪಿಗೆ: ಮುಷ್ಕರ ವಾಪಸ್‌
ಬಿಆರ್‌ಎಸ್‌ ಆಸ್ಪತ್ರೆ ಸಿಬ್ಬಂದಿಯ ಮುಷ್ಕರ ಹಾಗೂ ವೇತನ ಸಮಸ್ಯೆ ಬಗೆಹರಿಸುವ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿದ್ದು, ಶನಿವಾರ ಆಸ್ಪತ್ರೆಯ ಸಿಬ್ಬಂದಿಗೆ ಒಂದು ತಿಂಗಳ ವೇತನ ಪಾವತಿಸುವುದಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಹಾಗಾಗಿ, ಸಿಬ್ಬಂದಿ ಮುಷ್ಕರ ಹಿಂಪಡೆದಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.