
ಬ್ರಹ್ಮಾವರ: ಭಾರತದ ಆರ್ಥಿಕತೆಯು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯನ್ನು ಅವಲಂಬಿಸಿದೆ. ಇದು ಸಾಧ್ಯವಾಗಬೇಕಾದರೆ, ಆರ್ಥಿಕ ಚಟುವಟಿಕೆಗಳಿಂದ ಹೊರಗುಳಿದವರ ಸೇರ್ಪಡೆ ಅನಿವಾರ್ಯ ಎಂದು ಕೆನರಾ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಟಿ.ಎಸ್.ಎನ್. ಪೂರ್ಣಾನಂದ ಹೇಳಿದರು.
ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ಬ್ಯಾಂಕ್ ಮಿತ್ರ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಳಮಟ್ಟದ ಜನರ ಸಂಪರ್ಕವನ್ನು ಪ್ರಯತ್ನಿಸುವ, ಬ್ಯಾಂಕ್ ಪ್ರತಿನಿಧಿಯಾಗಿ ಸೇವೆ ನೀಡುವ ವ್ಯವಸ್ಥೆ ಇದಾಗಿದೆ. ಬ್ಯಾಂಕ್ ಮಿತ್ರ ಯೋಜನೆಯು ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಬ್ಯಾಂಕ್ ಮಿತ್ರ ಅಭ್ಯರ್ಥಿಗಳು ಕಮಿಷನ್‌ಗಾಗಿ ಕೆಲಸ ಮಾಡಬೇಡಿ. ಸೇವೆಯೆಂದು ಮನಗಂಡು ಕೆಲಸ ಮಾಡಿದಲ್ಲಿ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ದೊರೆಯುತ್ತದೆ. ಬ್ಯಾಂಕ್‌ಗೆ ಪೂರಕವಾಗಿ ಕಾರ್ಯ ಮಾಡಬೇಕು ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ ಮಾತನಾಡಿ, ಬ್ಯಾಂಕ್ ಮಿತ್ರ ಯೋಜನೆಯ ಮುಖ್ಯ ಉದ್ದೇಶ ಬ್ಯಾಂಕ್ ಶಾಖೆಗಳಿಲ್ಲದ ಕಡೆ ಮತ್ತು ಇಲ್ಲಿಯ ತನಕ ಬ್ಯಾಂಕಿಂಗ್ ಸೌಲಭ್ಯಗಳಿಂದ ಹೊರಗುಳಿದವರಿಗೆ, ಬ್ಯಾಂಕಿಂಗ್ ಸೇವೆಯನ್ನು ಒದಗಿಸುವುದಾಗಿದೆ. ಬ್ಯಾಂಕ್ ಮಿತ್ರ ಅಭ್ಯರ್ಥಿಗಳು ಬ್ಯಾಂಕ್‌ನ ಪ್ರತಿನಿಧಿಗಳು. ಶಾಖೆ ಮತ್ತು ಸುತ್ತಮುತ್ತಲಿನ ಜನರ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕು ಎಂದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಬೊಮ್ಮಯ್ಯ ಎಂ ಮಾತನಾಡಿ, ಸಂಸ್ಥೆಯು ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆಯಿರಿ. ಸಾಮಾನ್ಯ ಜನರಿಗೆ ನಿಮ್ಮಿಂದ ಬ್ಯಾಂಕಿಂಗ್ ಕ್ಷೇತ್ರದ ಕುರಿತಾಗಿ ಉತ್ತಮ ಮಾಹಿತಿಗಳು ಲಭಿಸಲಿ ಎಂದರು.
ಬ್ಯಾಂಕ್ ಮಿತ್ರ ತರಬೇತುದಾರ ಸುಂದರೇಶ, ಅತಿಥಿ ಉಪನ್ಯಾಸಕಿ ರಾಜಲಕ್ಷ್ಮಿ ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು. ಉಪನ್ಯಾಸಕಿ ಚೈತ್ರಾ ಕೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸಂತೋಷ ಸ್ವಾಗತಿಸಿದರು. ಕಚೇರಿ ಸಹಾಯಕ ಶಾಂತಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.