
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಬ್ರಹ್ಮಾವರ: ‘ಪರೀಕ್ಷೆ ಹತ್ತಿರ ಬರುವಾಗ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗುತ್ತದೆ. ಆದ್ದರಿಂದ ನಕಾರಾತ್ಮಕ ಚಿಂತನೆಗಳನ್ನು ಬಿಡಿ. ಪರೀಕ್ಷೆಗೆ ಹೆದರಬೇಡಿ, ಸಿದ್ಧತೆ ಮಾಡಿಕೊಳ್ಳಿ. ಆಗ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ’ ಎಂದು ಉಡುಪಿಯ ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಹೇಳಿದರು.
‘ಪ್ರಜಾವಾಣಿ’ ಸಹಯೋಗದಲ್ಲಿ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ‘ಪರೀಕ್ಷೆ ಎದುರಿಸುವುದು ಹೇಗೆ?’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪರೀಕ್ಷೆಗೆ ಕಷ್ಟಪಟ್ಟು ಓದಿ ಎಂದು ಮಕ್ಕಳಿಗೆ ಎಲ್ಲರೂ ಸಲಹೆ ನೀಡುತ್ತಾರೆ. ಆದರೆ ಇಷ್ಟಪಟ್ಟು ಓದಿ ಎಂದು ಯಾರೂ ಹೇಳುವುದಿಲ್ಲ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಬದಲಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಪ್ರೋತ್ಸಾಹಿಸಬೇಕು’ ಎಂದರು.
‘ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಎಲ್ಲಾ ಮುಗಿಯಿತು ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳಬಾರದು ಮತ್ತು ಯಾವುದೇ ಕೆಟ್ಟ ಆಲೋಚನ ಮಾಡಬಾರದು. ಪರೀಕ್ಷೆ ಮುಖ್ಯ, ಆದರೆ ಅದರ ಬಗ್ಗೆ ಅತಿಯಾದ ಒತ್ತಡ ಸಲ್ಲದು’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಅತಿಯಾದ ಒತ್ತಡ ಉಂಟಾದರೆ, ಅವರಲ್ಲಿ ದೈಹಿಕ, ಮಾನಸಿಕ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಸಕಾರಾತ್ಮಕ ಯೋಚನೆಗಳನ್ನು ಮಾಡಿ, ಇನ್ನೊಬ್ಬರ ಜೊತೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ’ ಎಂದರು.
‘ಪರೀಕ್ಷೆಯ ಸಂದರ್ಭದಲ್ಲಿ ಓದಿನ ನಡುವೆ ಅಲ್ಪ ವಿರಾಮವನ್ನೂ ಪಡೆದುಕೊಳ್ಳಿ. ಮೊಬೈಲ್ ಫೋನ್‌ನ ಅತಿಯಾದ ಬಳಕೆ ಬೇಡ. ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದರೆ ಸಮಯ ನಿಮ್ಮ ಹಿಡಿತಕ್ಕೆ ಸಿಗುವುದಿಲ್ಲ. ರೀಲ್ಸ್‌ಗೂ ಲೈಫ್‌ಗೂ ನಿಜವಾದ ಬದುಕಿಗೂ ವ್ಯಾತ್ಯಾಸವಿದೆ ಎಂಬುದನ್ನು ತಿಳಿದುಕೊಳ್ಳಿ’ ಎಂದು ಹೇಳಿದರು.
ಕ್ರಾಸ್‌ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲ ರಾಬರ್ಟ್ ಕ್ಲೈವ್ ಮಾತನಾಡಿದರು. ಉಪಪ್ರಾಂಶುಪಾಲ ಬಿಜು ಜೇಕಬ್, ಕಾರ್ಯಕ್ರಮದ ಸಂಯೋಜಕಿ ಸುಮಿತ್ರ, ಉಪನ್ಯಾಸಕಿಯರಾದ ಮಮತಾ, ಸರಿತಾ, ಸುಪ್ರಿತಾ, ರೂಪಾ, ದೀಪಾ, ಸ್ಮಿತಾ ಮೈಪಾಡಿ, ನಿಸರ್ಗ ಸಹಕರಿಸಿದರು.
ಪ್ರಜಾವಾಣಿ ಜಿಲ್ಲಾ ವರದಿಗಾರ ನವೀನ್ ಕುಮಾರ್ ಜಿ., ಪ್ರಜಾವಾಣಿ ಪ್ರಸರಣ ವಿಭಾಗದ ಪ್ರತಿನಿಧಿ ಸತೀಶ್ ಕೆ., ಪ್ರಜಾವಾಣಿ ಬ್ರಹ್ಮಾವರ ವರದಿಗಾರ ಶೇಷಗಿರಿ ಭಟ್ ಉಪಸ್ಥಿತರಿದ್ದರು.
ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆ, ಚೇರ್ಕಾಡಿ ಶಾರದಾ ಪ್ರೌಢಶಾಲೆ ಮತ್ತು ಕ್ರಾಸ್ ಲ್ಯಾಂಡ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಪರೀಕ್ಷಾ ಸಂದರ್ಭದಲ್ಲಿ ಅತಿಯಾದ ಒತ್ತಡವಾಗದೆ ಯಾವ ರೀತಿ ಓದಬೇಕು ಜ್ಞಾಪಕ ಶಕ್ತಿ ವೃದ್ಧಿಸಲು ಏನು ಮಾಡಬೇಕು. ಮೊದಲಾದ ಉಪಯುಕ್ತ ಮಾಹಿತಿಯು ಕಾರ್ಯಾಗಾರದಿಂದ ಲಭಿಸಿದೆ.ಕಾಂಚನಾ ದ್ವಿತೀಯ ಪಿಯುಸಿ ಕ್ರಾಸ್‌ಲ್ಯಾಂಡ್ ಪಿಯು ಕಾಲೇಜ್
ಯಾವುದೇ ಭಯ ಆತಂಕವಿಲ್ಲದೆ ಪರೀಕ್ಷೆ ಎದುರಿಸುವುದು ಹೇಗೆ ಎಂಬುದರ ಬಗ್ಗೆ ‘ಪ್ರಜಾವಾಣಿ’ ಸಹಯೋಗದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದ್ದಾರೆ.ಸೌಮ್ಯ ದ್ವಿತೀಯ ಪಿಯುಸಿ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆರೂರು
ಕಾರ್ಯಾಗಾರವು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಪರೀಕ್ಷೆಯ ಸಂದರ್ಭದಲ್ಲಿ ದೈಹಿಕ ಮಾನಸಿಕ ಆರೋಗ್ಯವನ್ನು ಕಾಡಿಕೊಳ್ಳುವುದು ಹೇಗೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಪರೀಕ್ಷಾ ಸಂದರ್ಭದಲ್ಲಿ ಸಹಾಯಕವಾಗಲಿದೆ.ವಿನ್ಯಾಸ್ ಯು. ನಾಯ್ಕ ಹತ್ತನೇ ತರಗತಿ ಶಾರದಾ ಪ್ರೌಢ ಶಾಲೆ ಚೇರ್ಕಾಡಿ
ಪರೀಕ್ಷೆಯ ಬಗ್ಗೆ ಭಯಪಡದೆ ಹೇಗೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಒತ್ತಡದಿಂದ ಮಾನಸಿಕ ಸಮಸ್ಯೆ ಎದುರಾದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ವಿವರವಾಗಿ ಮಾಹಿತಿ ನೀಡಿದ್ದಾರೆ.ಕುಸುಮಾ ಶಿವಯೋಗಿ, ಮದಭಾವಿ ಹತ್ತನೇ ತರಗತಿ ಶ್ರೀನಿಕೇತನ ಹೈಸ್ಕೂಲ್, ಮಟಪಾಡಿ
ಕಾರ್ಯಕ್ರಮದಿಂದ ನನಗೆ ಉತ್ತಮ ಜ್ಞಾನ ದೊರೆತಿದೆ. ತುಂಬಾ ಖುಷಿ ಹಾಗೂ ಧೈರ್ಯವನ್ನು ತಂದುಕೊಟ್ಟಿದೆ ನನ್ನ ಮುಂದಿನ ಭವಿಷ್ಯಕ್ಕೆ ಇದು ತಳಹದಿಯಾಗಲಿದೆ.ನಕ್ಷ ಶೆಟ್ಟಿ, ದ್ವಿತೀಯ ಪಿಯುಸಿ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು
‘ಕಠಿಣ ಪರಿಶ್ರಮದಿಂದ ಯಶಸ್ಸು’ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲ ಜಾನ್ ಥೋಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಆತ್ಮವಿಶ್ವಾಸ ಮತ್ತು ಮನಃಸ್ಥಿತಿ ಬದುಕಿನ ಎರಡು ಸ್ಥಂಭಗಳು. ಇದು ನಮ್ಮ ನಿಯಂತ್ರಣದಲ್ಲಿದ್ದರೆ ನಮಗೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇರುವುದರಿಂದ ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಿ’ ಎಂದು ಹೇಳಿದರು. ‘ಆತ್ಮವಿಶ್ವಾಸ ಯಶಸ್ವಿಗೆ ದಾರಿ ಜೊತೆಗೆ ಸಮರ್ಪಕ ತಯಾರಿಯೂ ಅಗತ್ಯ. ಹಾಗಿದ್ದರೆ ಮಾತ್ರ ಯಾವುದೇ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುತ್ತೀರಿ ’ ಎಂದರು.
‘ಅತಿಯಾದ ಒತ್ತಡಕ್ಕೆ ಒಳಗಾಗಬೇಡಿ’ ‘ಸ್ವಜಾಗೃತಿಯು ಭಾವನಾತ್ಮಕ ಶಕ್ತಿಯ ಮೊದಲ ಹೆಜ್ಜೆ. ಭಾವನೆಗಳನ್ನು ಸ್ವೀಕರಿಸಿ ಅದು ಸಹಜ. ಆದರೆ ಪರೀಕ್ಷೆ ಹತ್ತಿರವಾಗುವಾಗ ಅತಿಯಾದ ಒತ್ತಡಕ್ಕೆ ಒಳಗಾಗಬೇಡಿ’ ಎಂದು ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಶಾಲೆಯ ಆಪ್ತ ಸಲಹೆಗಾರ್ತಿ ಡಾ. ಜುಡಿತ್ ಲೂವಿಸ್ ಹೇಳಿದರು ‘ಅತಿಯಾದ ಒತ್ತಡವಾದರೆ ಪೋಷಕರು ಅಥವಾ ಶಿಕ್ಷಕರ ಜೊತೆಗೆ ಮುಕ್ತವಾಗಿ ಮಾತನಾಡಿ. ಗುರಿ ಸಾಧನೆಯೇ ನಿಮ್ಮ ಧ್ಯೇಯವಾಗಬೇಕು. ಪ್ರೀತಿ ಪ್ರೇಮ ಮೊದಲಾದ ಭಾವನಾತ್ಮಕ ಸಂಬಂಧಗಳಿಗಾಗಿ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದರು. ‘ಕೃತಜ್ಞತೆ ಸಮಯ ನಿರ್ವಹಣೆ ಡಿಜಿಟಲ್ ಶಿಸ್ತಿನ ಮಹತ್ವವನ್ನು ಅರಿತುಕೊಳ್ಳಿ. ಮೊಬೈಲ್ ಅನ್ನು ಒಳ್ಳೆಯದಕ್ಕೂ ಬಳಸಿಕೊಳ್ಳಬಹುದು ಕೆಟ್ಟದ್ದಕ್ಕೂ ಬಳಸಿಕೊಳ್ಳಬಹುದು. ಆದ್ದರಿಂದ ಓದಿನ ಸಂದರ್ಭದಲ್ಲಿ ಅದರಿಂದ ದೂರವಿರಿ. ನೀವೇ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.