ADVERTISEMENT

‘ಮಕ್ಕಳಿಗೆ ನೈತಿಕ ಶಿಕ್ಷಣದಿಂದ ಸಂಸ್ಕಾರ’

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 12:31 IST
Last Updated 6 ಫೆಬ್ರುವರಿ 2023, 12:31 IST
ಬ್ರಹ್ಮಾವರ ಹೆರಂಜೆ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ ಆವರಣದಲ್ಲಿ ನಡೆದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು
ಬ್ರಹ್ಮಾವರ ಹೆರಂಜೆ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ ಆವರಣದಲ್ಲಿ ನಡೆದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು   

ಬ್ರಹ್ಮಾವರ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಪಠ್ಯ ವಿಷಯದೊಂದಿಗೆ ನೈತಿಕ ಶಿಕ್ಷಣ ನೀಡಿ ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಬ್ರಹ್ಮಾವರ ಹೆರಂಜೆ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬ್ರಹ್ಮಾವರ ಶಾಖೆಯ ಆಶ್ರಯದಲ್ಲಿ ನಡೆದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಮತ್ತು ಶಿಕ್ಷಕ ಬಂಧುಗಳ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಮಾಡುವುದು ಸಹಜ. ಆದರೆ, ಇದರೊಂದಿಗೆ ತಮ್ಮ ಕರ್ತವ್ಯವನ್ನು ಮರೆಯಬಾರದು. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಕೊಡಬೇಕು. ಶಿಕ್ಷಕ– ಶಿಕ್ಷಕಿಯರಿಗೆ ಮಾನಸಿಕ ನೆಮ್ಮದಿ ಇದ್ದಲ್ಲಿ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಇದೆ ಎಂದು ಹೇಳಿದರು.

ADVERTISEMENT

ಹೊಸ ಶಿಕ್ಷಣ ಪದ್ಧತಿಯನ್ನು ಅಳವಡಿಸುವ ಮೊದಲು ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಅರಿತುಕೊಳ್ಳುವುದು ಅಗತ್ಯ. ಶಿಕ್ಷಣ ವ್ಯಾಪಾರೀಕರಣ ಆಗಬಾರದು. ಶಾಲೆಗಳನ್ನು ವಿಲೀನಗೊಳಿಸುವುದರಿಂದ ಶಿಕ್ಷಕರ ಜವಾಬ್ದಾರಿ ಹೆಚ್ಚುತ್ತದೆ. ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಯ ಜೀವನದ ಬುನಾದಿ. ಆದ್ದರಿಂದ ಹೊಸ ಶಿಕ್ಷಣ ನೀತಿಗಳನ್ನು ಜಾರಿಗೊಳಿಸುವ ಮೊದಲು ಚಿಂತನೆ ಅಗತ್ಯ ಎಂದರು.

ಇಂದು ಎಲ್ಲೆಡೆ ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದಾಗಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಡಿಮೆ ಆಗದಂತೆ ನೋಡಿಕೊಳ್ಳುವುದು ಉತ್ತಮ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ಶಾಸಕ ಕೆ.ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಉದ್ಯಮಿ ಹಾಗೂ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉದ್ಯಮಿಗಳಾದ ಆರೂರು ಶ್ರೀಧರ ಶೆಟ್ಟಿ, ಹುಬ್ಬಳ್ಳಿಯ ರಾಜೇಂದ್ರ ಶೆಟ್ಟಿ, ಶಾಂತರಾಮ ಶೆಟ್ಟಿ, ಪ್ರಸಾದ್‌ರಾಜ್‌ ಕಾಂಚನ್‌, ಡಿಡಿಪಿಐ ಗಣಪತಿ ಕೆ, ಬ್ರಹ್ಮಾವರದ ಬಿಇಒ ರಂಗನಾಥ ಕೆ, ಶಿಕ್ಷಕರ ಸಂಘದ ಕೆ.ದಿನಕರ ಶೆಟ್ಟಿ ಅಂಪಾರು, ಬೈಂದೂರಿನ ಶೇಖರ ಪೂಜಾರಿ, ಕುಂದಾಪುರದ ಗಣೇಶ ಕುಮಾರ ಶೆಟ್ಟಿ, ಬ್ರಹ್ಮಾವರದ ಶಾಂತರಾಜ ಶೆಟ್ಟಿ, ಕಾರ್ಕಳದ ರಮಾನಂದ ಶೆಟ್ಟಿ, ಅರುಣ್‌ ಕುಮಾರ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ ಇದ್ದರು.

ಬಸವರಾಜ ಹೊರಟ್ಟಿ ಅವರನ್ನು ಶಿಕ್ಷಕರ ಸಂಘದ ವತಿಯಿಂದ ಗೌರವಿಸಲಾಯಿತು. ಸಂಘಟನೆಯ ವತಿಯಿಂದ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌, ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಬಿ.ಟಿ.ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 85ಕ್ಕಿಂತ ಅಧಿಕ ಅಂಕ ಪಡೆದ ಶಿಕ್ಷಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಇದಕ್ಕೂ ಮುನ್ನ ಶಿಕ್ಷಕ ದಂಪತಿಗೆ ಆದರ್ಶ ದಂಪತಿ ಸ್ಪರ್ಧೆ ಮತ್ತು ‘ಕನ್ನಡ ಮಾಧ್ಯಮ ಶಾಲೆಗಳ ಸವಾಲುಗಳು ಮತ್ತು ಪರಿಹಾರ ಹಾಗೂ ಹೊಸ ಶಿಕ್ಷಣ ನೀತಿ’ ಬಗ್ಗೆ ಸಂಪನ್ಮೂಲ ವ್ಯಕ್ತಿ ಆರೂರು ತಿಮ್ಮಪ್ಪ ಶೆಟ್ಟಿ ಉಪನ್ಯಾಸ ನೀಡಿದರು.

ಸಂಘದ ಅಧ್ಯಕ್ಷ ಪ್ರಶಾಂತ್‌ ಶೆಟ್ಟಿ ಹಾವಂಜೆ ಸ್ವಾಗತಿಸಿದರು. ರವಿ ಎಸ್‌ ಪೂಜಾರಿ ಬೈಕಾಡಿ ವಂದಿಸಿದರು. ಶಿಕ್ಷಕರಾದ ಸುಬ್ರಹ್ಮಣ್ಯ ಉಪ್ಪುಂದ ಮತ್ತು ಶಶಿಧರ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.