ಬ್ರಹ್ಮಾವರ: ಧರ್ಮಸ್ಥಳದ ಧರ್ಮಾಧಿಕಾರಿ, ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನವನ್ನು ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಸಂಘಟನೆ ಆಸರೆ ವತಿಯಿಂದ ನಂಚಾರಿನ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್‌ನ ಗೋಶಾಲೆಯಲ್ಲಿ ಆಚರಿಸಲಾಯಿತು.
ಗೋಶಾಲೆಯಲ್ಲಿ ಇರುವ 200ಕ್ಕೂ ಅಧಿಕ ಗೋವುಗಳಿಗೆ ಹೂವಿನ ಹಾರ ಹಾಕಿ ಶೃಂಗಾರ ಮಾಡಿ, ಅರಶಿನ ಕುಂಕುಮ ಹಚ್ಚಿ, ಆರತಿ ಮಾಡಲಾಯಿತು. ನವಧಾನ್ಯಗಳಿಂದ ಕೂಡಿದ ಆಹಾರವನ್ನು ಪ್ರತಿಯೊಂದು ಹಸುವಿಗೆ ನೀಡಿ, ಗೋವುಗಳಿಗೆ ಬೇಕಾದ ಪಶುಆಹಾರ (ಹಿಂಡಿ), ಒಣಹುಲ್ಲು, ಸಹಾಯಧನ ಗೋಶಾಲೆಗೆ ನೀಡಲಾಯಿತು.
ರುಡ್‌ಸೆಟ್ ಸಂಸ್ಥೆ ನಿರ್ದೆಶಕ ಲಕ್ಷ್ಮೀಶ ಎ.ಜಿ. ಮಾತನಾಡಿ, ನಾಡಿನ ಅತಿ ಅಮೂಲ್ಯ ಸಂಪತ್ತು ಗೋವುಗಳು. ಅವುಗಳಿಗೆ ಆಹಾರ ಒದಗಿಸುವುದರ ಮೂಲಕ ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬವನ್ನು ರುಡ್‌ಸೆಟ್ ಆಸರೆ ಸಂಘಟನೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.
ರುಡ್‌ಸೆಟ್ ಉಪನ್ಯಾಸಕ ಕೆ. ಕರುಣಾಕರ ಜೈನ್ ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ದೂರದೃಷ್ಟಿಯ ಕನಸು ಕಂಡು ನನಸು ಮಾಡುತ್ತಿರುವ ರುಡ್‌ಸೆಟ್ ಸಂಸ್ಥೆ, ಸಮಾಜದ ಹೆಮ್ಮೆಯ ದಾರ್ಶನಿಕ ಹೆಗ್ಗಡೆ ಅವರ ಹುಟ್ಟುಹಬ್ಬವನ್ನು ಗೋಸೇವೆಯೊಂದಿಗೆ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಆಸರೆ ಸಂಘಟನೆ ಗೌರವಾಧ್ಯಕ್ಷ ರಾಜೇಶ ದೇವಾಡಿಗ, ಮಾಜಿ ಅಧ್ಯಕ್ಷ, ಉದ್ಯಮಿ ಕೆ.ಸಿ. ಅಮೀನ್, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಚಂದ್ರಶೇಖರ ನಾವುಡ, ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್‌ನ ಪ್ರಮುಖ ರಾಜೇಂದ್ರ ಚಕ್ಕರೆ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಸುಲೇಖಾ, ರುಡ್‌ಸೆಟ್ ಉಪನ್ಯಾಸಕ ಸಂತೋಷ ಶೆಟ್ಟಿ, ರವಿ ಸಾಲ್ಯಾನ್, ಬ್ಯೂಟೀಶಿಯನ್ ತರಬೇತಿಯ ಗೌರವ ಉಪನ್ಯಾಸಕಿ ಪ್ರೀತಿ, ಆಸರೆ ಸಂಘಟನೆಯ ಬಿ. ಕುಶ, ಪ್ರವೀಣ್ ಮಲ್ಪೆ, ರಾಜಲಕ್ಷ್ಮಿ, ಸುಜ್ಯೋತಿ, ನಾಗರತ್ನ, ಶಾರದಾ, ರಾಗಿಣಿ, ಭವ್ಯ ಇದ್ದರು. ಆಸರೆ ಅಧ್ಯಕ್ಷೆ ಹರಿಣಿ ಅಜಯ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಸೂರಜ್ ಶೆಟ್ಟಿ ನಿರೂಪಿಸಿದರು. ಕೋಶಾಧಿಕಾರಿ ವೆಂಕಟೇಶ ನಾಯ್ಕ ವಂದಿಸಿದರು.
ಗೋಗ್ರಾಸ ನೀಡಿ ಆಚರಣೆ; 200ಕ್ಕೂ ಅಧಿಕ ಗೋವುಗಳಿಗೆ ಪೂಜೆ ಗೋಶಾಲೆಗೆ ಪಶುಆಹಾರ, ಒಣಹುಲ್ಲು, ಸಹಾಯಧನ ಕೊಡುಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.