
ಬ್ರಹ್ಮಾವರ: ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪರೀಕ್ಷಾ ಸಮಯದಲ್ಲಿ ತಮ್ಮ ದಿನಚರಿ ಬದಲಿಸಿಕೊಂಡು ಮಕ್ಕಳ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳುವತ್ತ ಗಮನ ನೀಡಿ, ಓದುವ ವಾತಾವರಣ ಸೃಷ್ಟಿಸಿಕೊಡಬೇಕು ಎಂದು ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಸಲಹೆ ನೀಡಿದರು.
ಚೇರ್ಕಾಡಿಯ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪೇತ್ರಿಯ ವಿದ್ಯಾ ಟ್ಯುಟೋರಿಯಲ್, ಚೇರ್ಕಾಡಿ ಶಾರದಾ ಪ್ರೌಢಶಾಲೆ, ಪೇತ್ರಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪೋಷಕರು, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಿರಾತಂಕ ಇದ್ದಾಗ ಮಾತ್ರ ದಕ್ಷತೆ ಹೊರಹೊಮ್ಮಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಉತ್ತಮ ಅಂಕ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಹೆಚ್ಚು ಕಂಡು ಬರುತ್ತದೆ. ಓದು ಮುಗಿದ ನಂತರ ಗಟ್ಟಿಯಾಗಿ ಇತರರಿಗೆ ಓದಿ ಹೇಳುವ ಕಲೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಲ್ಲಿ ಮನನ ಶಕ್ತಿ ಹೆಚ್ಚುತ್ತದೆ ಎಂದರು.
ಪರೀಕ್ಷಾ ಸಮಯದಲ್ಲಿ ಮೊಬೈಲ್, ಟಿ.ವಿ, ಸ್ನೇಹಿತರ ಜತೆ ಹರಟುವುದರಿಂದ ಸಮಯ, ಮನಸ್ಸು ಹಾಳಾಗುತ್ತದೆ. ಇವೆಲ್ಲದರಿಂದ ದೂರ ಇದ್ದು ಪರೀಕ್ಷಾ ವೇಳಾಪಟ್ಟಿ ತಯಾರಿಸಿ ಸಮಯ ನಿಗದಿ ಪಡಿಸಿ ಓದುವುದರಿಂದ ಪರೀಕ್ಷಾ ಭಯ ದೂರ ಮಾಡಬಹುದು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪಂಚಾಯಿತಿ ಹಂತದಲ್ಲೇ ವಿದ್ಯಾರ್ಥಿಗಳ ಫಲಿತಾಂಶ ಉತ್ತಮ ಪಡಿಸುವಿಕೆ ಬಗ್ಗೆ ಕಾರ್ಯಾಗಾರಗಳು ನಡೆದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.
ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ನಾಯ್ಕ, ಉಪಾಧ್ಯಕ್ಷೆ ಪ್ರತಿಮಾ, ಚೇರ್ಕಾಡಿ ಶಾರದಾ ಪ್ರೌಢಶಾಲೆ ಆಡಳಿತ ಮಂಡಳಿಯ ಬಿ.ಟಿ.ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ಸಾಮಗ, ಲಯನ್ಸ್ ಕ್ಲಬ್ ಅಧ್ಯಕ್ಷ ಹಿಮರಾಜ್, ಶಾರದಾ ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜುನಾಥ ನಾಯ್ಕ, ಸಮೃದ್ಧಿ ಮಹಿಳಾ ಮಂಡಳಿ ಅಧ್ಯಕ್ಷೆ ಶೈಲಾ ಭಾಗವಹಿಸಿದ್ದರು. ವಿದ್ಯಾ ಟ್ಯುಟೋರಿಯಲ್‌ನ ಕಮಲಾಕ್ಷ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಭೂಮಿಕಾ ಸ್ವಾಗತಿಸಿದರು. ಆದ್ಯ ವಂದಿಸಿದರು. ಪ್ರಜ್ಞಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.