ಬ್ರಹ್ಮಾವರ: ‘ಬಹು ಧರ್ಮ, ಬಹು ಜಾತಿಗಳ ಈ ದೇಶದಲ್ಲಿ ನಾವೆಲ್ಲಾ ಒಂದಾಗಿ ಸಹೋದರತೆಯ ಭಾವದಲ್ಲಿ ಬದುಕಬೇಕು’ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದಕ್ಷಿಣ ವಲಯದ ಕಾರ್ಯದರ್ಶಿ ಜಯಣ್ಣ ಹೇಳಿದರು.
ಚೇರ್ಕಾಡಿಯ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಕ್ಷೆಗೆ ಭಾರತೀಯರನ್ನು ಒಂದುಗೂಡಿಸುವ ಶಕ್ತಿ ಇದೆ. ರಕ್ಷೆಯಲ್ಲಿರುವ ಅನೇಕ ದಾರದ ಎಳೆಗಳು ನಮ್ಮಲ್ಲಿರುವ ಬೇರೆ ಬೇರೆ ಭಾವಗಳನ್ನು ಬದಿಗಿರಿಸಿ ಐಕ್ಯಭಾವವನ್ನು ಮೂಡಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಮಹತ್ವ ತಿಳಿಸಿದರು.
ಭೌತವಿಜ್ಞಾನ ಉಪನ್ಯಾಸಕ ಪ್ರದೀಪ ಅವರು, ರಕ್ಷಾಬಂಧನ ಆಚರಣೆಯ ಮೂಲಕ ನಿಮ್ಮೆಲ್ಲರ ಆಸೆಗಳು ಈಡೇರಲಿ. ನಿಮ್ಮ ಸುತ್ತಮುತ್ತಲಿನ ಸಂಬಂಧಿಗಳು, ಜನರ ಮೇಲೆ ನಿಮಗೆ ನಂಬಿಕೆ ಮೂಡಲಿ ಎಂದರು.
ವಿದ್ಯಾರ್ಥಿ ನರಹರಿ ಭಟ್ ಸಂಸ್ಕೃತ ಭಾಷಾ ದಿನದ ಮಹತ್ವ ತಿಳಿಸಿದರು. ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ ರಕ್ಷಾಬಂಧನದ ಶುಭಾಶಯ ಹೇಳಿದರು. ಬಳಿಕ ವಿದ್ಯಾರ್ಥಿಗಳು ಅತಿಥಿಗಳಿಂದ ರಕ್ಷೆ ಕಟ್ಟಿಸಿಕೊಂಡು ಆಶೀರ್ವಾದ ಪಡೆದರು. ಹಿಂದಿ ಉಪನ್ಯಾಸಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮೇಶ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.