ADVERTISEMENT

ಬಂದ್‌: ಸಿಗದ ನಿರೀಕ್ಷಿತ ಬೆಂಬಲ

ಬಂದ್‌ಗೆ ಬೆಂಬಲ ನೀಡದ ಸಿಟಿ ಬಸ್‌ ಮಾಲೀಕರು: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:53 IST
Last Updated 7 ಜನವರಿ 2019, 13:53 IST
ನಗರದ ಸಿಟಿ ಬಸ್‌ ನಿಲ್ದಾಣ
ನಗರದ ಸಿಟಿ ಬಸ್‌ ನಿಲ್ದಾಣ   

ಉಡುಪಿ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಕರೆ ನೀಡಿರುವ ಭಾರತ ಬಂದ್‌ಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ.

ಬಂದ್‌ಗೆ ಸಿಟಿ ಬಸ್‌ ಮಾಲೀಕರ ಸಂಘ ಬೆಂಬಲ ಸೂಚಿಸಿಲ್ಲ. ಹಾಗಾಗಿ, ನಗರದಲ್ಲಿ ಬಸ್ ಸಂಚಾರ ಇರಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ತಿಳಿಸಿದರು.

ವರ್ಕಿಂಗ್ ಯುನಿಯನ್‌ ಬಂದ್‌ಗೆ ಬಂಬಲ ನೀಡುವಂತೆ ಕೋರಿದ್ದಾರೆ. 2 ದಿನಗಳ ಬಂದ್‌ನಿಂದ ಜನರಿಗೆ ತೀವ್ರ ತೊಂದರೆಯಾಗುವುದನ್ನು ಮನಗಂಡು ಬೆಂಬಲ ನೀಡದಿರಲು ನಿರ್ಧರಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಬಸ್‌ಗಳ ಸಂಚಾರಕ್ಕೆ ಅಡ್ಡಿಮಾಡದಿದ್ದರೆ ಸಂಚಾರ ಎಂದಿನಂತೆ ಇರಲಿದೆ ಎಂದರು.

ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಬೇಕೆ ಬೇಡವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಬಂದ್‌ ದಿನ ಪರಿಸ್ಥಿತಿಯನ್ನು ನೋಡಿಕೊಂಡು ಬಸ್‌ಗಳನ್ನು ಓಡಿಸಲಾಗುವುದು ಎಂದು ವಿಭಾಗೀಯ ನಿಯಂತ್ರಕ ದೀಪಕ್‌ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರತಿಭಟನಾಕಾರರು ಬಸ್‌ಗಳ ಓಡಾಟಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರೆ ಬಸ್‌ಗಳ ಸಂಚಾರ ಇರುವುದಿಲ್ಲ. ದೂರದ ಊರುಗಳಿಗೆ ತೆರಳಬೇಕಿದ್ದವರಿಗೆ ಸಮಸ್ಯೆಯಾಗಲಿದೆ.

ಮತ್ತೊಂದೆಡೆ, ಹೋಟೆಲ್‌ ಮಾಲೀಕರ ಸಂಘ ಬಂದ್‌ಗೆ ಬೆಂಬಲ ಸೂಚಿಸಿದೆ. ಆದರೆ, ಹೋಟೆಲ್‌ಗಳು ಮುಚ್ಚುವಂತೆ ಇದುವರೆಗೂ ಸೂಚನೆ ಬಂದಿಲ್ಲ. ಪರಿಸ್ಥಿತಿ ನೋಡಿಕೊಂಡು ಹೋಟೆಲ್‌ ಬಂದ್‌ ಮಾಡಬೇಕೆ ಬೇಡವೇ ಎಂದು ನಿರ್ಧರಿಸಲಾಗುವುದು ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮಶೆಟ್ಟಿ ತಿಳಿಸಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬಂದ್‌ ಯಶಸ್ವಿಗೆ ಮನವಿ ಮಾಡಿದೆ.ಸಿ.ಐ.ಟಿ.ಯು, ಎ.ಐ.ಟಿ.ಯು.ಸಿ, ಇಂಟಕ್ ಸೇರಿದಂತೆ ಬ್ಯಾಂಕ್, ವಿಮೆ, ರಕ್ಷಣಾ ವಲಯ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, 12 ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ಮಂಗಳವಾರ ಹಾಗೂ ಬುಧವಾರ ಪ್ರತಿಭಟನೆ ನಡೆಸಲಾಗುವುದು ಎಂದು ಜೆಸಿಟಿಯು ಸಂಘಟನೆ ತಿಳಿಸಿದೆ.

ನಗರದಲ್ಲಿ ಮಂಗಳವಾರ ಬೆಳಿಗ್ಗೆ 10ಕ್ಕೆಅಜ್ಜರಕಾಡಿನ ಎಲ್.ಐ.ಸಿ ಕಚೇರಿ ಆವರಣದಿಂದ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಲಿದೆ. ಜೋಡುಕಟ್ಟೆ. ಕೆ.ಎಂ. ಮಾರ್ಗ ಮುಖಾಂತರ ಮಹಾತ್ಮಗಾಂಧಿ ಪ್ರತಿಮೆ ಸುತ್ತುವರಿದು, ಬಿ.ಎಸ್.ಎನ್.ಎಲ್ ಕಚೇರಿ ರಸ್ತೆಯಿಂದ ಕಾರ್ಪೋರೇಶನ್ ಬ್ಯಾಂಕ್‌ ಕಚೇರಿ ಆವರಣದಲ್ಲಿ ಮೆರವಣಿಗೆ ಸಮಾರೋಪಗೊಳ್ಳಲಿದೆ ಎಂದು ಜೆಸಿಟಿಯು ಸಂಚಾಲಕ ಕೆ.ಶಂಕರ್ ತಿಳಿಸಿದ್ದಾರೆ.

ಉಳಿದಂತೆ ಆರೋಗ್ಯ, ಔಷಧಾಲಯ ಹಾಗೂ ತುರ್ತು ಸೇವೆಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.