ADVERTISEMENT

ಬೈಂದೂರು: ಕಾಲು ಸಂಕ ದಾಟುವಾಗ ಕೊಚ್ಚಿಹೋದ ಬಾಲಕಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 13:41 IST
Last Updated 8 ಆಗಸ್ಟ್ 2022, 13:41 IST
ಬಾಲಕಿ ಸನ್ನಿಧಿ
ಬಾಲಕಿ ಸನ್ನಿಧಿ   

ಬೈಂದೂರು (ಉಡುಪಿ ಜಿಲ್ಲೆ): ಸಮೀಪದ ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಕಾಲುಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಬಾಲಕಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಚಪ್ಪರಿಕೆ ಸರ್ಕಾರಿ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಬೊಳಂಬಳ್ಳಿ ಮಕ್ಕಿಮನೆ ಪ್ರದೀಪ ಪೂಜಾರಿ ಹಾಗೂ ಸುಮಿತ್ರಾ ಪುತ್ರಿ ಸನ್ನಿಧಿ (7) ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ. ಸತತ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳವು ಬೊಳಂಬಳ್ಳಿ ಬಳಿ ಹೊಳೆಗೆ ಸೇರುತ್ತಿದ್ದು, ನೀರಿನ ಸೆಳೆತಕ್ಕೆ ಬಾಲಕಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶೋಧಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಅಧಿಕಾರಿಗಳು, ಸ್ಥಳೀಯರು ಹಳ್ಳ ಹಾಗೂ ಹೊಳೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಹಲವು ವರ್ಷಗಳಿಂದ ಈ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸುತ್ತಲೇ ಬಂದಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇಲ್ಲಿ ಕಿರು ಸೇತುವೆ ನಿರ್ಮಾಣ ಆಗಿಲ್ಲ. ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಅನಾಹುತ ನಡೆದಿದೆ’ ಎಂದು ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.