ADVERTISEMENT

ಶಿಕ್ಷಣದಲ್ಲಿ ಬಲ: ಕ್ರೀಡೆಯಲ್ಲಿ ಮಹಿಳಾ ಛಲ

ಡಾ. ಜಿ.ಶಂಕರ್‌ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 7:28 IST
Last Updated 14 ಜುಲೈ 2024, 7:28 IST
ಡಾ. ಜಿ.ಶಂಕರ್‌ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ
ಡಾ. ಜಿ.ಶಂಕರ್‌ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ   

ಉಡುಪಿ: ಗುಣಮಟ್ಟದ ಶಿಕ್ಷಣ, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ, ಮೂಲ ಸೌಕರ್ಯಗಳೊಂದಿಗೆ ನಗರದ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್‌ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ವಿದ್ಯಾರ್ಥಿನಿಯರನ್ನು ಕೈಬಿಸಿ ಕರೆಯುತ್ತಿದೆ.

ನ್ಯಾಕ್‌ನಿಂದ ‌‘ಎ’ ಗ್ರೇಡ್‌ ಲಭಿಸಿರುವ ಈ ಕಾಲೇಜಿನಲ್ಲಿ ಜಿಲ್ಲೆಯಿಂದಷ್ಟೇ ಅಲ್ಲದೆ ಇತರ ಜಿಲ್ಲೆಗಳ ವಿದ್ಯಾರ್ಥಿನಿಯರೂ ಕಲಿಯುತ್ತಿದ್ದಾರೆ. ಕಾಲೇಜಿನ ಸಮೀಪದಲ್ಲೇ ವಸತಿನಿಲಯಗಳ ಸೌಲಭ್ಯವಿರುವುದು ವಿದ್ಯಾರ್ಥಿನಿಯರಿಗೆ ವರದಾನವಾಗಿದೆ.

2022ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಮತ್ತು ಬೆಂಚ್‌ಪ್ರೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಜಿ. ನಾಯ್ಕ್‌ ಚಿನ್ನದ ಪದಕ ಪಡೆದುಕೊಂಡಿರುವುದು ಈ ಕಾಲೇಜಿನಲ್ಲಿ ಕ್ರೀಡಾ ಚಟುವಟಿಕೆ ಪೋಷಣೆಗೆ ಸಾಕ್ಷಿಯಾಗಿದೆ.

ADVERTISEMENT

2003ರಲ್ಲಿ ಆರಂಭವಾದ ಈ ಕಾಲೇಜಿಗೆ ಜಿ. ಶಂಕರ್‌ ಅವರು ಸುಸಜ್ಜಿತವಾದ ಕಟ್ಟಡಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಿ.ಎ.ಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ಸಮಾಜ ಶಾಸ್ತ್ರ, ಕನ್ನಡ ಐಚ್ಛಿಕ, ಇಂಗ್ಲಿಷ್‌ ಐಚ್ಛಿಕ, ಮನಃಶಾಸ್ತ್ರ, ಪತ್ರಿಕೋದ್ಯಮ ಹಾಗೂ ಬಿ.ಎಸ್ಸಿ.ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ಸಯನ್ಸ್‌, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ಕೋರ್ಸ್‌ಗಳು ಲಭ್ಯವಿವೆ. ಅಲ್ಲದೆ ಬಿ.ಕಾಂ., ಬಿಬಿಎ, ಬಿಸಿಎ ಕೋರ್ಸ್‌ಗಳೂ ಇವೆ.

ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎ.ಯಲ್ಲಿ ಇತಿಹಾಸ, ಸಮಾಜ ವಿಜ್ಞಾನ ಹಾಗೂ ಎಂ.ಎಸ್ಸಿ.ಯಲ್ಲಿ ಗಣಿತ, ರಸಾಯನ ಶಾಸ್ತ್ರ ಮತ್ತು ಎಂ. ಕಾಂ. ಕೋರ್ಸ್‌ಗಳಿವೆ.

2023–24ನೇ ಸಾಲಿನಲ್ಲಿ ಕಾಲೇಜಿಗೆ ಮೂರು ರ‍್ಯಾಂಕ್‌ಗಳು ಬಂದಿವೆ. ಎಂ.ಎಸ್ಸಿ. ರಸಾಯನ ಶಾಸ್ತ್ರದಲ್ಲಿ ಪ್ರಥಮ ರ್‍ಯಾಂಕ್‌ ಮತ್ತು ಎಂ.ಕಾಂ.ನಲ್ಲಿ ಎರಡು ರ‍್ಯಾಂಕ್‌ಗಳು ಇಲ್ಲಿನ ವಿದ್ಯಾರ್ಥಿನಿಯರಿಗೆ ಲಭಿಸಿವೆ. 2023–24ರ ಸಾಲಿನಲ್ಲಿ 2009 ಮಂದಿ ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಕಲಿತಿದ್ದಾರೆ. 42 ಮಂದಿ ಕಾಯಂ ಬೋಧಕರು ಮತ್ತು 65 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಕಾಯಂ ಬೋಧಕರಲ್ಲಿ 18 ಮಂದಿ ಪಿಎಚ್‌ಡಿ ಪದವೀಧರರಿದ್ದಾರೆ.

ವಿದ್ಯಾರ್ಥಿನಿಯರಿಗೆ ಕೆ.ಸೆಟ್‌, ಎನ್‌.ಇ.ಟಿ. ತರಬೇತಿಯನ್ನೂ ನೀಡಲಾಗುತ್ತಿದೆ. ರೆಡ್‌ಕ್ರಾಸ್‌, ಎನ್‌.ಎಸ್.ಎಸ್., ರೇಂಜರ್ಸ್‌ ರೋವರ್ಸ್‌ ಘಟಕಗಳು ವಿದ್ಯಾರ್ಥಿನಿಯರ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿವೆ. ವಿಕಿಪೀಡಿಯಾಕ್ಕೆ ಕಾಲೇಜಿನ ವಿದ್ಯಾರ್ಥಿನಿಯರು 2000ಕ್ಕೂ ಹೆಚ್ಚು ಬರಹಗಳನ್ನು ಬರೆದಿದ್ದಾರೆ.

ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ ನೀಡುವುದರ ಜೊತೆಗೆ, ಹಲವಾರು ದಿಗ್ಗಜ ಐ.ಟಿ. ಕಂಪನಿಗಳನ್ನು ಕರೆಸಿ ಕ್ಯಾಂಪಸ್‌ ಸಂದರ್ಶನವನ್ನೂ ನಡೆಸಲಾಗುತ್ತಿದೆ. ಈಗಾಗಲೇ ಹಲವು ವಿದ್ಯಾರ್ಥಿನಿಯರು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.

ಮುಂದಿನ ವರ್ಷ ಪ್ರವಾಸೋದ್ಯಮ ವಿಷಯದಲ್ಲಿ ಬಿಬಿಎ ಆರಂಭಿಸುವ ಚಿಂತನೆ ಇದೆ. ಡಾ.ಜಿ.ಶಂಕರ್‌ ಅವರು ಕಾಲೇಜಿಗೆ ಸಾಕಷ್ಟು ನೆರವು ನೀಡುತ್ತಿದ್ದಾರೆ. ಶಾಸಕ ಯಶ್‌ಪಾಲ್‌ ಸುವರ್ಣ ಅವರ ಪ್ರಯತ್ನದಿಂದ ರೋಬೊಸಾಫ್ಟ್‌ ಕಂಪನಿಯವರು ಕಾಲೇಜಿಗೆ 75 ಕಂಪ್ಯೂಟರ್‌ಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ಪ್ರಾಂಶುಪಾಲ ಭಾಸ್ಕರ್‌ ಶೆಟ್ಟಿ ಎಸ್‌. ತಿಳಿಸಿದರು.

ಸಭಾಂಗಣದ ಅಗತ್ಯವಿದೆ: ಎರಡು ಸಾವಿರ ವಿದ್ಯಾರ್ಥಿನಿಯರು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಸಭಾಂಗಣದ ಅಗತ್ಯವಿದೆ. 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಂಪ್ಯೂಟರ್ ಸೈನ್ಸ್ ಕೋರ್ಸ್‌ ಕಲಿಯುತ್ತಿದ್ದು, ಇನ್ನೂ ಸುಮಾರು 200ರಷ್ಟು ಕಂಪ್ಯೂಟರ್‌ಗಳು ಸಿಕ್ಕಿದರೆ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.

ಕಾಲೇಜಿನ ಗ್ರಂಥಾಲಯ

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕಾಲೇಜನ್ನು ಕಾರ್ಪೋರೆಟ್‌ ಶೈಲಿಯಲ್ಲಿ ಬೆಳೆಸುವ ಚಿಂತನೆ ಇದೆ. ಅದಕ್ಕಾಗಿ ಮುಂದೆ ಕಾರ್ಯಪ್ರವೃತ್ತರಾಗಲಿದ್ದೇವೆ ಭಾಸ್ಕರ್‌ ಶೆಟ್ಟಿ ಎಸ್‌. ಪ್ರಾಂಶುಪಾಲರು

ಹಸಿರು ಗ್ರಂಥಾಲಯ ಕಾಲೇಜಿನ ಗ್ರಂಥಾಲಯವನ್ನು ಹಸಿರು ಗ್ರಂಥಾಲಯದ ಪರಿಕಲ್ಪನೆಯಲ್ಲಿ ಸಜ್ಜುಗೊಳಿಸಲಾಗಿದೆ. ಗ್ರಂಥಾಲಯದ ಒಳಗೂ ಹೊರಗೂ ಅಲ್ಲಲ್ಲಿ ನಳ ನಳಿಸುವ ಹಸಿರು ಗಿಡಗಳು ಹಸಿರಿನ ವಾತಾವರಣವನ್ನು ಸೃಷ್ಟಿಸಿವೆ. ಗ್ರಂಥಾಲಯದಲ್ಲಿ 24 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಡಿಜಟಲ್‌ ಗ್ರಂಥಾಲಯದಲ್ಲಿ ಲಕ್ಷಕ್ಕೂ ಹೆಚ್ಚು ಇ–ಪುಸ್ತಕಗಳು ಲಭ್ಯವಿವೆ. ಅಲ್ಲದೆ ದಿನಪತ್ರಿಕೆಗಳು ವಾರಪತ್ರಿಕೆಗಳು ಸಂಶೋಧನೆಗೆ ಸಂಬಂಧಿಸಿದ ನಿಯತಕಾಲಿಕೆಗಳೂ ಕೂಡ ವಿದ್ಯಾರ್ಥಿನಿಯರ ಓದಿಗೆ ಸಹಕಾರಿಯಾಗಿದೆ. 3500ಕ್ಕೂ ಹೆಚ್ಚು ಪಠ್ಯಪುಸ್ತಕಗಳನ್ನು ಡಿಜಿಟಲ್‌ ರೂಪಕ್ಕೆ ತರಲಾಗಿದೆ. ಕ್ಯುಆರ್‌ ಕೋಡ್‌ಗಳನ್ನು ಸ್ಕ್ಯಾನ್‌ ಮಾಡಿ ವಿವಿಧ ವಿಷಯಗಳ ಹಳೆಯ ಪ್ರಶ್ನೆಪತ್ರಿಕೆಗಳನ್ನು ವೀಕ್ಷಿಸುವ ಅನುಕೂಲವೂ ಇಲ್ಲಿದೆ. ವೆಬ್‌ ಒಪೆಕ್‌ ಗ್ರಂಥಾಲಯ ವ್ಯವಸ್ಥೆಯೊಂದಿಗೆ ಸಂಯೋಜಿಸಿರುವುದರಿಂದ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ನಲ್ಲಿ ಪ್ರಕಟಗೊಳ್ಳುವ ಕೃತಿಗಳನ್ನು ಓದಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.