ADVERTISEMENT

ಏಪ್ರಿಲ್‌ ಪರಿವರ್ತನಾ ಮಾಸಾಚರಣೆ: ನಾರಾಯಣ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 15:22 IST
Last Updated 15 ಮಾರ್ಚ್ 2021, 15:22 IST
ನಾರಾಯಣ ಸ್ವಾಮಿ 
ನಾರಾಯಣ ಸ್ವಾಮಿ    

ಉಡುಪಿ: ಅಂಬೇಡ್ಕರ್ ಹುಟ್ಟಿದ ಏಪ್ರಿಲ್ ತಿಂಗಳನ್ನು ಪರಿವರ್ತನಾ ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಏ.14ರಂದು 310 ಬಿಜೆಪಿ ಮಂಡಲಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಪರಿವರ್ತನಾ ಮಾಸವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ದಲಿತರ ಕೇರಿ, ಸಮುದಾಯ ಭವನಗಳ ನವೀಕರಣ, ಸ್ವಾಸ್ಥ್ಯ ಕಾರ್ಯಕ್ರಮ, ನೆರವು ಕಾರ್ಯಕ್ರಮಗಳ ಮೂಲಕ ಮಾಸಾಚರಣೆ ನಡೆಸಲಾಗುತ್ತದೆ ಎಂದರು.

14ರಂದು ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರಗಳೊಂದಿಗೆ ಪಾದಯಾತ್ರೆ ನಡೆಸಲಿದ್ದು, ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಸಭೆ ನಡಸಲಿದ್ದಾರೆ ಎಂದರು.

ADVERTISEMENT

7 ದಶಕಗಳಿಂದ ಕಾಂಗ್ರೆಸ್ ದಲಿತರನ್ನು ಮತಕ್ಕಾಗಿ ಬಳಸಿಕೊಂಡು ದಾರಿ ತಪ್ಪಿಸಿತ್ತು. ಈಗ ದಲಿತರು ಎಚ್ಚೆತ್ತುಕೊಂಡಿದ್ದು, ದಲಿತರೇ ಕಾಂಗ್ರೆಸ್ ದಾರಿ ತಪ್ಪಿಸಲಿದ್ದಾರೆ. ಬಿಜೆಪಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ, ಸಂವಿಧಾನ ಬದಲಾಯಿಸುವ ಪಕ್ಷ, ಮೀಸಲಾತಿ ರದ್ದಾಗುತ್ತದೆ ಎಂದೆಲ್ಲ ಅಪಪ್ರಚಾರ ಮಾಡಿ ದಲಿತರ ಮತ ಸೆಳೆಯಲಾಗುತ್ತಿತ್ತು. ಈಗ ಅಪ್ರಚಾರಕ್ಕೆ ತೆರೆಬಿದ್ದಿದ್ದು, ದಲಿತರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತಿದ್ದಾರೆ ಎಂದರು.

ಇತರ ಸಮುದಾಯಗಳು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಮೀಸಲಾತಿ ಕೊಡುವುದರಿಂದ ದಲಿತರಿಗೆ ಸಂವಿಧಾನಾತ್ಮಕವಾಗಿ ನೀಡಲಾಗಿರುವ ಮೀಸಲಾತಿಯಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಕೋಶಾಧಿಕಾರಿ ನಾಗೇಶ್ ದೇವನಹಳ್ಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದಿನೇಶ್ ಅಮ್ಟೂರು, ಮುಖಂಡರಾದ ರವಿ ಅಮೀನ್, ನಳಿನಿ ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.