ADVERTISEMENT

ಪರಂಪರಾ ಕಲಾವೇದಿಕೆಯಡಿ ತರಗತಿ ಆರಂಭ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:01 IST
Last Updated 26 ಸೆಪ್ಟೆಂಬರ್ 2022, 16:01 IST
ಮಣಿಪಾಲದಲ್ಲಿರುವ ತಪೋವನ ಸಂಸ್ಥೆಯಲ್ಲಿರುವ ಕರಕುಶಲ ವಸ್ತುಗಳು.
ಮಣಿಪಾಲದಲ್ಲಿರುವ ತಪೋವನ ಸಂಸ್ಥೆಯಲ್ಲಿರುವ ಕರಕುಶಲ ವಸ್ತುಗಳು.   

ಉಡುಪಿ: ನಾಡಿನ ಶ್ರೀಮಂತ ಪ್ರಾಚೀನ ಕಲೆ, ಸಂಸ್ಕೃತಿ, ಕರಕುಶಲ ವಸ್ತುಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ತಪೋವನ ಸಂಸ್ಥೆಯು ಶ್ರಮಿಸುತ್ತಿದ್ದು ಲಲಿತ ಕಲೆಗಳ ಪ್ರೋತ್ಸಾಹಕ್ಕೆ ಪರಂಪರಾ ಕಾಲವೇದಿಕೆಯನ್ನು ಹುಟ್ಟುಹಾಕಿದೆ ಎಂದು ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಸತ್ಯಜಿತ್ ಕಡಕೋಳ ತಿಳಿಸಿದರು.

ಸೋಮವಾರ ಸಂಸ್ಥೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಕಲಾ ಪ್ರಕಾರಗಳ ಎಂಪೋರಿಯಂ ಆಗಿರುವ ತಪೋವನದಲ್ಲಿ ಪರಂಪರಾ ಕಲಾವೇದಿಕೆ ತಲೆ ಎತ್ತಿದ್ದು ಅ.10ರಿಂದ ಲಲಿತಕಲೆಗಳ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ತರಗತಿಗಳಿಗೆ ಪ್ರವೇಶ ಪಡೆಯಲು ವಯಸ್ಸಿನ ಮಿತಿ ಇಲ್ಲ. ಕಲಾಸಕ್ತಿ ಹೊಂದಿರುವವರು ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಸಂಪ್ರದಾಯ ಬದ್ಧವಾಗಿ ತರಬೇತಿ ನೀಡಲಾಗುವುದು. ಪ್ರತಿಸೋಮವಾರ ಸಂಜೆ 5.30ಕ್ಕೆ ವಿಧುಷಿ ಚಿನ್ಮಯಿ ದೀಕ್ಷಿತ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸಲಿದ್ದಾರೆ.

ADVERTISEMENT

ಮಂಗಳವಾರ ವಿಧುಷಿ ಧನ್ಯಶ್ರೀ ಪ್ರಭು ಭರತನಾಟ್ಯ ಹೇಳಿಕೊಡಲಿದ್ದಾರೆ. ಗುರುವಾರ ಮತ್ತು ಶುಕ್ರವಾರ ರಂಗಕರ್ಮಿ ರೇವತಿ ನಾಡಿಗೇರ್ ರಂಗಭೂಮಿ ತರಬೇತಿ ನೀಡಲಿದ್ದಾರೆ. ಭಾನುವಾರ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸುಜಯೀಂದ್ರ ಹಂದೆ ಯಕ್ಷಗಾನ ತರಗತಿ ನಡೆಸಲಿದ್ದಾರೆ. ವೇದವ್ಯಾಸ ಸಂಶೋಧನಾ ಕೇಂದ್ರದ ಡಾ.ಎಸ್.ಆನಂದ ತೀರ್ಥರು ಭಗವದ್ಗೀತೆ ತರಗತಿಗಳನ್ನು ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಯಕ್ಷಗಾನ ಹಾಗೂ ಭಗವದ್ಗೀತೆ ತರಗತಿಗಳು ನಿರ್ಧಿಷ್ಟ ಅವಧಿಯ ಕೋರ್ಸ್‌ ಆಗಿದ್ದು ತರಬೇತಿ ಮುಗಿಸಿದವರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಮಾದರಿಯ ನೃತ್ಯ, ಕಲಾ ಪ್ರಕಾರಗಳನ್ನು ಕಲಿಸಲು ಸಂಸ್ಥೆ ಉತ್ಸುಕವಾಗಿದೆ. ಕಲೆ, ಕಲಾವಿದರು ಮತ್ತು ಕಲಾಸಕ್ತರನ್ನು ಜೋಡಿಸುವ ವೇದಿಕೆಯಾಗಿ ವಿವಿಧ ಲಲಿತ ಕಲೆಗಳನ್ನು ಪರಿಚಯಿಸುವ ಉದ್ದೇಶವನ್ನು ಪರಂಪರಾ ಹೊಂದಿದೆ ಎಂದರು.

ಆಸಕ್ತರು ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಸಂಸ್ಥೆಯನ್ನು ಸಂಪರ್ಕಿಸಬಹುದು. ಮಾಹಿತಿಗೆ 8762563517, 9008033981 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ತಪೋವನದ ನಿರ್ದೇಶಕರಾದ ವೆಂಕಟೇಶ್ ಶೇಟ್, ರತಿಲಾಲ್ ಪಟೇಲ್, ಜಯಂತ ಲಾಲ್ ಪಟೇಲ್, ಪರಂಪರಾ ಸಂಯೋಜಕಿ ಮೈತ್ರಿ ಉಪಾಧ್ಯಾಯ, ಸಂಸ್ಥೆಯ ರೇವತಿ ನಾಡಿಗೇರ್‌ ಹಾಗೂ ಗುರುಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.