ADVERTISEMENT

ನಮ್ಮ ಉಡುಪಿ-ಸ್ವಚ್ಛ ಉಡುಪಿ ಸಂಕಲ್ಪ ಮಾಡಿ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 14:23 IST
Last Updated 1 ಅಕ್ಟೋಬರ್ 2021, 14:23 IST

ಉಡುಪಿ: ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಅವರ ಅತ್ಯಂತ ಪ್ರೀತಿ ಪಾತ್ರವಾದ ಸ್ವಚ್ಛತಾ ಕಾರ್ಯಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕರೆ ನೀಡಿದರು.

ಎಂಜಿಎಂ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕ್ಲೀನ್ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ಕಸ ಕೊಂಡೊಯ್ಯುವ ಸ್ವಚ್ಛ ವಾಹಿನಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ರಾಷ್ಟ್ರಮಟ್ಟದಲ್ಲಿ ಅ.1ರಿಂದ 31ರವರೆಗೆ ‘ಕ್ಲೀನ್ ಇಂಡಿಯಾ’ ಕಾರ್ಯಕ್ರಮ ನಡೆಯುತ್ತಿದ್ದು, ಅದರ ಭಾಗವಾಗಿ ಜಿಲ್ಲೆಯಲ್ಲೂ ಸ್ವಚ್ಛತಾ ಅಭಿಯಾನ ನಡೆಸಿ, ಜಿಲ್ಲೆಯನ್ನು ಸ್ವಚ್ಛಗೊಳಿಸಬೇಕು. ರಸ್ತೆಗೆ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ಸ್ಥಳೀಯಾಡಳಿತ, ಗ್ರಾಮ ಪಂಚಾಯಿತಿ, ಅಥವಾ ಎಸ್‌ಎಲ್‌ಆರ್‌ಎಂ ಘಟಕಗಳಿಗೆ ಹಸ್ತಾಂತರಿಸಬೇಕು ಎಂದು ಕರೆ ನೀಡಿದರು.

ADVERTISEMENT

ಕ್ಲೀನ್ ಇಂಡಿಯಾ ಅಭಿಯಾನ ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ನಡೆಯುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಉಡುಪಿ ಜಿಲ್ಲಾಡಳಿತದ ಜತೆಗೆ ನಗರಸಭೆ, ಎನ್ಎಸ್ಎಸ್, ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ರೋವರ್ಸ್‌ ಅಂಡ್ ರೇಂಜರ್ಸ್, ಸಂಘಟನೆಗಳು, ಸ್ವಸಹಾಯ ಸಂಘಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಯುವಕ ಯುವತಿಯರು ಭಾಗವಹಿಸಿದ್ದರು. ಒಂದು ತಿಂಗಳು ನಡೆಯುವ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೆಸಿಐ, ಇಂಡಿಯನ್ ಸೀನಿಯರ್ ಸಿಟಿಜನ್, ಸ್ವಚ್ಛ ಭಾರತ್ ಪ್ರೆಂಡ್ಸ್, ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಇತರ ಸಂಘಟನೆಗಳು ಭಾಗವಹಿಸಲಿವೆ. ಬ್ಯಾಂಕ್‌ಗಳು ಹಾಗೂ ಸಂಸ್ಥೆಗಳು ಹಣಕಾಸು ನೆರವು ನೀಡುತ್ತಿವೆ.

ಕ್ಲೀನ್ ಇಂಡಿಯಾದ ಜಿಲ್ಲಾ ನೋಡಲ್ ಆಧಿಕಾರಿ ಶ್ರೀನಿವಾಸ್, ಪೌರಾಯುಕ್ತ ಉದಯ್ ಶೆಟ್ಟಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಪೀರ್‌ಸಾಬ್ ಪಿಂಜರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ ನಾಯಕ್, ಸ್ವಚ್ಛ ಭಾರತ್ ಪ್ರೆಂಡ್ಸ್ ಗಣೇಶ್ ನಾಯಕ್, ರಾಘವೇಂದ್ರ ಕರ್ವಾಲೊ, ಬಿವಿಟಿ ಸಂಸ್ಥೆಯ ಸಿಇಒ ಮಣಿಪಾಲ ಮನೋಹರ್ ಇದ್ದರು.ಜಿಲ್ಲಾ ಯುವ ಜನ ಅಧಿಕಾರಿ ವಿಲ್ಫ್ರೆಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಜಲಶಕ್ತಿ ಹಾಗೂ ಸ್ವಚ್ಛ ಭಾರತ್ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.