ಕಾಪು ತಾಲ್ಲೂಕಿನ ಮೂಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲಿಸಿದರು
ಪ್ರಜಾವಾಣಿ ಚಿತ್ರ
ಉಡುಪಿ: ಕರಾವಳಿಯ ಜಿಲ್ಲೆಗಳಲ್ಲಿ ಕಡಲ್ಕೊರೆತ ನಿರಂತರ ಸಮಸ್ಯೆಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ತಡೆಗೆ ₹ 300 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಾಪು ತಾಲ್ಲೂಕಿನ ಮೂಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗರರ ಜೊತೆಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಕಡಲ್ಕೊರೆತ ಸಂಭವಿಸಿರುವ ಪ್ರದೇಶಗಳಲ್ಲಿ ಹಾಗೂ ಈ ಹಿಂದೆ ಕಡಲ್ಕೊರೆತ ಸಂಭವಿಸಿರುವ ಪ್ರದೇಶಗಳಲ್ಲಿ ಕಡಲ್ಕೊರೆತ ತಡೆಗಾಗಿ ₹100 ಕೋಟಿ ಅಂದಾಜು ವೆಚ್ಚದ ಯೋಜನೆ ತಯಾರಿಸಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಯೋಜನೆಯನ್ನು ಆದಷ್ಟು ಶೀಘ್ರ ಅಂತಿಮಗೊಳಿಸುತ್ತೇವೆ. ವೈಜ್ಞಾನಿಕ ಪರಿಣತರನ್ನು ಕರೆಸಿ ಕಡಲ್ಕೊರೆತಕ್ಕೆ ಯಾವ ಮಾದರಿಯ ತಡೆ ಕಾಮಗಾರಿ ನಡೆಸಿದರೆ ಹೆಚ್ಚು ಸೂಕ್ತ ಎಂದು ಅಧ್ಯಯನ ನಡೆಸಲು ಸೂಚಿಸುತ್ತೇವೆ. ಅನಂತರ ಕ್ರಿಯಾ ಯೋಜನೆಗೆ ಅನುಮೋದನೆ ನೀಡುತ್ತೇವೆ. ಇದು ದೀರ್ಘಾವಧಿಯ ಯೋಜನೆಯಾಗಿದ್ದು, ಅನುಷ್ಠಾನಕ್ಕೆ ಕನಿಷ್ಠ ಎರಡು ವರ್ಷಗಳಾದರೂ ಬೇಕಾಗಬಹುದು ಎಂದು ಹೇಳಿದರು.
ಕಡಲ್ಕೊರೆತ ತಡೆಗೆ ಮದ್ರಾಸ್ ಐಐಟಿಯವರು ಕೆಲವು ಶಿಫಾರಸುಗಳನ್ನು ಮಾಡಿದ್ದಾರೆ. ಅದರಂತೆ 100 ಮೀಟರ್‌ಗೆ ₹ 15 ಕೋಟಿ ವೆಚ್ಚವಾಗಬುದು. ಇಷ್ಟು ವೆಚ್ಚದ ಕಾಮಗಾರಿ ನಡೆಸುವುದಾದರೆ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ ಎಂದರು.
ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಲ್ಲಿ ಗುಡ್ಡ ಕುಸಿತ ತಡೆಗಟ್ಟಲು ₹500 ಕೋಟಿಯ ಯೋಜನೆ ರೂಪಿಸಲಾಗುವುದು. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದವರಿಂದ ಅಧ್ಯಯನ ನಡೆಸಿ, ಅವರು ಕೊಡುವ ವರದಿಯ ಆಧಾರದಲ್ಲಿ ₹ 500 ಕೋಟಿ ವೆಚ್ಚದಲ್ಲಿ ಗುಡ್ಡಜರಿತ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದರು.
ಕೇಂದ್ರದಿಂದ ಬರಬೇಕಾಗಿದೆ: ರಾಜ್ಯಕ್ಕೆ ಅವಶ್ಯಕತೆಗೆ ಅನುಗುಣವಾಗಿ ಯೂರಿಯಾ ಬಂದಿಲ್ಲ. ಇನ್ನೂ ಶೇ 15 ರಿಂದ ಶೇ 20 ರಷ್ಟು ಯೂರಿಯಾ ಕೇಂದ್ರದಿಂದ ಬರಬೇಕಾಗಿದೆ. ಅದಕ್ಕಾಗಿ ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದೇವೆ. ಆದರೆ ಅವರು ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.