ADVERTISEMENT

ಖರೀದಿ ವೇಳೆ ಕಡ್ಡಾಯ ಬಿಲ್ ಪಡೆಯಿರಿ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿ.ಎ.ಶೋಭಾ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 14:14 IST
Last Updated 15 ಮಾರ್ಚ್ 2021, 14:14 IST
ನಗರದ ಅಂಬಲಪಾಡಿಯ ಮಹಾಕಾಳಿ ಜನಾರ್ಧನ ದೇವಸ್ಥಾನದ ಭವಾನಿ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಉದ್ಘಾಟಿಸಿದರು.
ನಗರದ ಅಂಬಲಪಾಡಿಯ ಮಹಾಕಾಳಿ ಜನಾರ್ಧನ ದೇವಸ್ಥಾನದ ಭವಾನಿ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಉದ್ಘಾಟಿಸಿದರು.   

ಉಡುಪಿ: ಗ್ರಾಹಕರ ಹಿತರಕ್ಷಣೆಗೆ ಸರ್ಕಾರ ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದು, ಸಾರ್ವಜನಿಕರು ಯಾವುದೇ ವಸ್ತುಗಳನ್ನು ಖರೀದಿಸಿದಾಗ ಅನ್ಯಾಯವಾದರೆ ಕಾಯ್ದೆಯಡಿ ನೆರವು ಪಡೆಯಬಹುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಹೇಳಿದರು.

ನಗರದ ಅಂಬಲಪಾಡಿಯ ಮಹಾಕಾಳಿ ಜನಾರ್ಧನ ದೇವಸ್ಥಾನದ ಭವಾನಿ ಮಂಟಪದಲ್ಲಿ ಸೋಮವಾರ ಜಿಲ್ಲಾ ಆಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಾರ್ತಾ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ಹಾಗೂ ಗ್ರಾಹಕ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಗ್ರಾಹಕರ ದಿನಾಚರಣೆಯನ್ನು ‘ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಸಾರ್ವಜನಿಕರು ದಿನನಿತ್ಯದ ಕಾರ್ಯಗಳಲ್ಲಿ ಬಳಸುತ್ತಿರುವ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.

ADVERTISEMENT

ಬಳಕೆಯಾದ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುವುದರಿಂದ ಪ್ರಾಣಿ, ಪಕ್ಷಿಗಳಿಗೆ ಕಂಟಕವಾಗಿ ಪರಿಣಮಿಸಲಿದೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯಿಂದ ಸಾಧ್ಯವಾದಷ್ಟು ದೂರವಿರಬೇಕು. ಅನಿವಾರ್ಯವಾದರೆ ಬಳಸಿದ ಪ್ಲಾಸ್ಟಿಕ್ ಉತ್ಪನ್ನಗಳ ಮರುಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಮಾತನಾಡಿ, ಗ್ರಾಹಕರ ಹಕ್ಕುಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಬೇಕಿದೆ. ಅನ್ಯಾಯವಾದಾಗ ಕಾಯ್ದೆಯಡಿ ನ್ಯಾಯ ಪಡೆದುಕೊಳ್ಳಬೇಕು ಎಂದರು.

ಉಡುಪಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಬೇಕು ಎಂಬ ಆಶಯವಿದ್ದು, ಪ್ರಜ್ಞಾವಂತ ನಾಗರಿಕರು ಕೈ ಜೋಡಿಸಬೇಕು. ಪ್ರತಿದಿನ ಕಸದ ಗಾಡಿಗಳಿಗೆ ಕಸ ನೀಡುವಾಗ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ನೀಡಬೇಕು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿ.ಎ.ಶೋಭಾ ಮಾತನಾಡಿ, ಗ್ರಾಹಕ ಖರೀದಿಸಿದ ಉತ್ಪನ್ನ ಅಥವಾ ಸೇವೆಯು ನ್ಯಾಯಸಮ್ಮತ, ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದಾಗಿರಬೇಕು. ಅವುಗಳಲ್ಲಿ ದೋಷ ಕಂಡುಬಂದು ಅನ್ಯಾಯವಾದಾಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಬಹುದು ಎಂದರು.

ಗ್ರಾಹಕ ವಸ್ತುಗಳನ್ನು ಉತ್ಪಾದಕರಿಂದ ಖರೀದಿ ಮಾಡುವಾಗ ತಪ್ಪದೆ ಬಿಲ್‌ ಪಡೆಯಬೇಕು. ಉತ್ಪನ್ನಗಳಿಗೆ ವಾರಂಟಿ ಕಾರ್ಡ್‌, ಅಂಗಡಿಯ ಮೊಹರು ಹಾಗೂ ಸಹಿ ಪಡೆಯಬೇಕು. ಆಗಮಾತ್ರ ಗ್ರಾಹಕ ಮತ್ತು ಕೊಳ್ಳುವವನ ಮಧ್ಯೆ ಕರಾರು ಏರ್ಪಟ್ಟಂತಾಗಲಿದ್ದು, ಗ್ರಾಹಕ ತನಗಾದ ಅನ್ಯಾಯದ ವಿರುದ್ಧ ಪ್ರಶ್ನಿಸಲು ಅನುಕೂಲವಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ವಿಮೆ ಮಾಡಿಸುವಾಗ ವಿಮಾ ಕಂಪೆನಿಗಳು ಒಪ್ಪಂದದ ಮಾಹಿತಿಯನ್ನು ನಿಖರವಾಗಿ ಗ್ರಾಹಕರಿಗೆ ತಿಳಿಸದೆ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಬಗ್ಗೆ ಗ್ರಾಹಕರು ಎಚ್ಚರ ವಹಿಸಬೇಕು ಎಂದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎ.ಪಿ.ಕೊಡಂಚ ಗ್ರಾಹಕ ರಕ್ಷಣೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮೊಹಮ್ಮದ್ ಇಸಾಕ್, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡಕೆ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್ ಇದ್ದರು. ಕಡಿಯಾಳಿ ಯು. ಕಮಲಾಬಾಯಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಉಡುಪಿ ಬಳಕೆದಾರರ ವೇದಿಕೆಯ ಟ್ರಸ್ಟಿ ಎ. ಲಕ್ಷ್ಮಿಬಾಯಿ ಕಾರ್ಯಕ್ರಮ ನಿರೂಪಿಸಿದರು. ಶಾಂತರಾಜ್ ಐತಾಳ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.