ADVERTISEMENT

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ: ಸಹಕಾರ ಸಪ್ತಾಹದಲ್ಲಿ ರೈತ ಸಮಾವೇಶ

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ ನ.14ರಿಂದ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 2:46 IST
Last Updated 12 ನವೆಂಬರ್ 2022, 2:46 IST

ಪಡುಬಿದ್ರಿ: 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಸಪ್ತಾಹದ ಏಳು ದಿನಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸಿ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದೆ.

ಸೊಸೈಟಿಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾಹಿತಿ ನೀಡಿದರು.

ರಾಷ್ಟ್ರದಾದ್ಯಂತ ನ.14ರಿಂದ 20ರವರೆಗೆ ಸಹಕಾರಿ ಸಪ್ತಾಹ ಆಚರಿಸಲಾಗುತ್ತದೆ. ನ.14ರಂದು ಮಧ್ಯಾಹ್ನ 3 ಗಂಟೆಗೆ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರೈತರ ಸಮಾವೇಶ ಹಾಗೂ ರೈತರಿಂದ ಹಿರಿಯ ಸಹಕಾರಿ ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ, ಕೃಷಿ ಸಹಾಯಧನ ವಿತರಣೆ, ಶೀತಲೀಕರಣ ಶವ ಪೆಟ್ಟಿಗೆ ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರ ಕಾರ್ಯಕ್ರಮವು ಸಹಕಾರ ಸಂಗಮದ ವೈ. ಲಕ್ಷ್ಮಣ ಸಭಾಂಗಣದಲ್ಲಿ ನಡೆಯಲಿದೆ.

ADVERTISEMENT

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಸಪ್ತಾಹ ಉದ್ಘಾಟಿಸುವರು. ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ, ಮಂಜುನಾಥ್ ಎಸ್. ಕೆ., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಪಲಿಮಾರ್, ಎ. ರಾಮಚಂದ್ರ ಆಚಾರ್ಯ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಗುವುದು.

ನ.15ರಂದು ‘ಸಹಕಾರ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ’ ಕುರಿತ ಗೋಷ್ಠಿಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸುವರು. 16ರಂದು ಪಡುಬಿದ್ರಿ ಪೊಲೀಸ್ ಠಾಣೆಗೆ ಧ್ವನಿವರ್ಧಕ ಹಾಗೂ ಸಂಚಾರ ನಿರ್ವಹಣೆ ಬೂತ್‌ ಅನ್ನು ಹಸ್ತಾಂತರಿಸಲಾಗುವುದು. ಸರ್ಕಲ್ ಇನ್‌ಸ್ಪೆಕ್ಟರ್ ಪೂವಯ್ಯ ಕೆ.ಸಿ. ಭಾಗವಹಿಸುವರು. ‘ಉದ್ಯಮ
ಶೀಲತೆ ಅಭಿವೃದ್ಧಿ, ಸಾರ್ವಜನಿಕ-ಖಾಸಗಿ– ಸಹಕಾರಿ ಸಹಭಾಗಿತ್ವವನ್ನು ಬಲಗೊಳಿಸುವುದು’ ಕುರಿತ ರಾಜ್ಯ
ಮಟ್ಟದ ಸಹಕಾರ ಸಪ್ತಾಹದ ಕಾರ್ಯ
ಕ್ರಮವು ಈ ಬಾರಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

19ರಂದು ಪಡುಬಿದ್ರಿ ಸೊಸೈಟಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಳೇ ವಿದ್ಯಾರ್ಥಿ ಸಂಘ, ಗಣಪತಿ ಪ್ರೌಢಶಾಲೆ ಆಶ್ರಯದಲ್ಲಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದ ಶೀತಲೀಕೃತ ಶವಾಗಾರದ ಉದ್ಘಾಟನೆ, ವೈದ್ಯಕೀಯ ಶಿಬಿರ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸುವರು. ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಡಾ. ನಾಗಭೂಷಣ ಉಡುಪ, ತಾಲ್ಲೂಕು ವೈದ್ಯಾಧಿಕಾರಿ ಡಾ. ವಾಸುದೇವ್ ಉಪಾಧ್ಯಾಯ ಮತ್ತಿತರರು ಭಾಗವಹಿಸಲಿದ್ದಾರೆ. 20ರಂದು ಸಹಕಾರ ಸಪ್ತಾಹದ ಸಮಾರೋಪದ ಕಾರ್ಯಕ್ರಮವು ನಡೆಯಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.