ADVERTISEMENT

ಕೋವಿಡ್‌ | ಮಹಾರಾಷ್ಟ್ರ ಮರ್ಮಾಘಾತಕ್ಕೆ ಬೆಚ್ಚಿದ ಉಡುಪಿ

ಒಂದೇ ದಿನ 28 ಮಂದಿಯಲ್ಲಿ ಕೋವಿಡ್ ಸೋಂಕು: ಕಂದಮ್ಮಗಳಿಗೂ ಅಂಟಿದ ಮಹಾಮಾರಿ

​ಪ್ರಜಾವಾಣಿ ವಾರ್ತೆ
Published 21 ಮೇ 2020, 14:14 IST
Last Updated 21 ಮೇ 2020, 14:14 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಉಡುಪಿ: ಜಿಲ್ಲೆಯಲ್ಲಿ ಒಂದೇ ದಿನ 28 ಮಂದಿಯಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಇದುವರೆಗೂ ಒಂದಂಕಿ ಲೆಕ್ಕದಲ್ಲಿ ದಾಖಲಾಗುತ್ತಿದ್ದ ಸೋಂಕಿತ ಪ್ರಕರಣಗಳು ಮೊದಲ ಬಾರಿಗೆ ಎರಡಂಕಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ ಮರ್ಮಾಘಾತ: ಬುಧವಾರದ ಒಟ್ಟು ಪ್ರಕರಣಗಳ ಪೈಕಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆ ಹೆಚ್ಚಾಗಿದೆ.ಮುಂಬೈ, ಪುಣೆ, ಥಾಣೆ, ಔರಂಗಾಬಾದ್‌, ಪಲ್‌ಘರ್ ನಗರಗಳಿಂದ ಉಡುಪಿಗೆ ಬಂದಿದ್ದ 21 ಮಂದಿಯಲ್ಲಿ ಸೋಂಕು ಇದ್ದರೆ, ತೆಲಂಗಾಣದಿಂದ ಬಂದಿದ್ದ ಮೂವರು, ಕೇರಳದಿಂದ ಚಿಕಿತ್ಸೆಗೆ ಬಂದಿದ್ದ ಒಬ್ಬರು ಹಾಗೂ ಯುಎಯಿನಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿಂದಿನ ಅರ್ಧದಷ್ಟು ಪ್ರಕರಣಗಳು ಕೂಡ ಮಹಾರಾಷ್ಟ್ರದ ಜತೆಗೆ ಸಂಪರ್ಕ ಹೊಂದಿರುವುದು ವಿಶೇಷ.‌

199 ವರದಿ:ಬುಧವಾರ 199 ಮಂದಿಯ ವೈದ್ಯಕೀಯ ವರದಿ ಕೈಸೇರಿದ್ದು, 28 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. ಈ ಪೈಕಿ 7 ಪುರುಷರು, 6 ಮಹಿಳೆಯರು ಹಾಗೂ 16 ಮಕ್ಕಳು ಇದ್ದಾರೆ. ಕ್ವಾರಂಟೈನ್‌ನಲ್ಲಿದ್ದ ಸೋಂಕಿತರನ್ನು ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ADVERTISEMENT

ಒಂದೇ ದಿನ ಡಬಲ್‌:ಮಾರ್ಚ್‌ 25ರಂದು ಜಿಲ್ಲೆಯಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿತ್ತು. ಬಳಿಕ ಮಾರ್ಚ್ 29ರಂದು ಇಬ್ಬರಲ್ಲಿ ಕಾಣಿಸಿಕೊಂಡಿದ್ದ ಸೋಂಕು ಒಂದೂವರೆ ತಿಂಗಳ ಕಾಲ ಜಿಲ್ಲೆಯಲ್ಲಿ ಸುಳಿದಿರಲಿಲ್ಲ. ಈ ಅವಧಿಯಲ್ಲಿ ಜಿಲ್ಲೆ ಗ್ರೀನ್‌ಝೋನ್ ವ್ಯಾಪ್ತಿಗೆ ಸೇರ್ಪಡೆಯಾಗಿತ್ತು. ಹಂತ ಹಂತವಾಗಿ ಅಗತ್ಯ ವಸ್ತುಗಳ ಖರೀದಿ ಸಮಯವನ್ನು ವಿಸ್ತರಿಸಿ, ಆರ್ಥಿಕತೆಗೆ ಉತ್ತೇಜನ ನೀಡಲಾಗಿತ್ತು. ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮೇ 12ರಂದು ದುಬೈನಿಂದ ಬಂದಿದ್ದ ಐವರಲ್ಲಿ ಸೋಂಕು ಪತ್ತೆಯಾಗಿ ಭೀತಿ ಹುಟ್ಟಿಸಿತು.

ಬಳಿಕ ಅಂತರ ರಾಜ್ಯಗಳಲ್ಲಿ ಸಿಲುಕಿದ್ದವರು ತವರಿಗೆ ಮರಳಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಮಹಾರಾಷ್ಟ್ರದಿಂದ 6 ಸಾವಿರಕ್ಕೂ ಹೆಚ್ಚು ಜನ ಉಡುಪಿಗೆ ಬಂದರು. ಈಗ ಅವರಲ್ಲಿ ಹಂತ ಹಂತವಾಗಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಮಂಗಳವಾರದವರೆಗೂ ಜಿಲ್ಲೆಯಲ್ಲಿ 22 ಇದ್ದ ಪ್ರಕರಣಗಳು ಬುಧವಾರ 49ರ ಗಡಿ ತಲುಪಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 49ಕ್ಕೇರಿಕೆಯಾಗಿದ್ದು, ಒಬ್ಬರು ಮೃತಪಟ್ಟು ಮೂವರು ಗುಣಮುಖರಾಗಿದ್ದಾರೆ. ಸದ್ಯ 45 ಸಕ್ರಿಯ ಪ್ರಕರಣಗಳು ಇವೆ.

ಕಂದಮ್ಮಗಳಿಗೂ ಅಂಟಿದ ಮಹಾಮಾರಿ
ಕೊರೊನಾ ಸೋಂಕಿನ ಬಗ್ಗೆ ಅರಿವೇ ಇಲ್ಲದ ಮುಗ್ಧ ಕಂದಮ್ಮಗಳಿಗೂ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಪತ್ತೆಯಾದ 28 ಸೋಂಕಿತ ಪ್ರಕರಣಗಳಲ್ಲಿ 16 ಮಕ್ಕಳೇ ಇದ್ದಾರೆ. ಒಂದು ವರ್ಷದ ಕಂದಮ್ಮನಿಂದ ಹಿಡಿದು 10 ವರ್ಷದ ಬಾಲಕನವರೆಗೂ ಕೊರೊನಾ ಮಹಾಮಾರಿ ಅಂಟಿದೆ. ಈ ಆಘಾತಕಾರಿ ವಿಚಾರವನ್ನು ಗಮನಿಸಿದರೆ ಪುಟ್ಟ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚು ಎಂಬುದು ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲ ಪೋಷಕರು ಹೆಚ್ಚು ಎಚ್ಚರವಹಿಸಬೇಕು ಎನ್ನುತ್ತಾರೆ ತಜ್ಞರು.

ಸೋಂಕಿತರು– ವಯಸ್ಸು– ಪ್ರಯಾಣ ಹಿನ್ನೆಲೆ

ಬಾಲಕ–2–ಮಹಾರಾಷ್ಟ್ರದ ಥಾಣೆ

ಬಾಲಕ–9–ಮಹಾರಾಷ್ಟ್ರದ ಪಲ್‌ಘರ್‌

ಮಹಿಳೆ–32–ಮಹಾರಾಷ್ಟ್ರದ ಮಲ್ಲಚಾಂದಿವಲ್ಲಿ

ಪುರುಷ–51–ಮಹಾರಾಷ್ಟ್ರದ ಸಾಹಿಲ್‌

ಪುರುಷ–33–ತೆಲಂಗಾಣ

ಬಾಲಕಿ–4–ಮುಂಬೈ

ಬಾಲಕ–6–ಥಾಣೆ

ಬಾಲಕ–6–ಥಾಣೆ

ಬಾಲಕ–4–ಮುಂಬೈ

ಬಾಲಕ–6–ಮುಂಬೈ

ಬಾಲಕಿ–7–ಮುಂಬೈ

ಪುರುಷ–32–ಹೈದರಾಬಾದ್

ಮಹಿಳೆ–51–ಮುಂಬೈ

ಬಾಲಕ–10–ಪುಣೆ

ಬಾಲಕ–6–ಪುಣೆ

ಪುರುಷ–33–ತೆಲಂಗಾಣ

ಬಾಲಕಿ–3–ಔರಂಗಾಬಾದ್

ಬಾಲಕಿ–5–ಥಾಣೆ

ಮಹಿಳೆ–26–ಮುಂಬೈ

ಪುರುಷ–24–ಮುಂಬೈ

ಪುರುಷ–21–ಮುಂಬೈ

ಪುರುಷ–60–ಕೇರಳ

ಬಾಲಕ–9–ಮುಂಬೈ

ಬಾಲಕಿ–1–ಮುಂಬೈ

ಬಾಲಕ–2–ಮುಂಬೈ‌

ಪುರುಷ–37–ಯುಎಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.