ADVERTISEMENT

ಬಕ್ರೀದ್‌: ಮಸೀದಿಗಳಲ್ಲಿ ಈದ್‌ ನಮಾಜ್‌

ಹಬ್ಬದ ಸಂಭ್ರಮಕ್ಕೆ ಅಡ್ಡಿಯಾದ ಕೊರೊನಾ; ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 11:56 IST
Last Updated 31 ಜುಲೈ 2020, 11:56 IST
ಬಕ್ರೀದ್ ಹಬ್ಬದ ದಿನವಾದ ಶುಕ್ರವಾರ ಉಡುಪಿಯ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
ಬಕ್ರೀದ್ ಹಬ್ಬದ ದಿನವಾದ ಶುಕ್ರವಾರ ಉಡುಪಿಯ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.    

ಉಡುಪಿ: ಕೋವಿಡ್‌ ಸೋಂಕು ಭೀತಿಯ ಮಧ್ಯೆ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಬಕ್ರೀದ್‌ ಆಚರಿಸಲಾಯಿತು. ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮಸೀದಿಗಳಲ್ಲಿ ಮುಸ್ಲಿಮರು ನಮಾಜ್‌ ಮಾಡಿದರು.

ಬೆಳಿಗ್ಗೆ 6ಕ್ಕೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಆರಂಭವಾಯಿತು. ಅಂತರ ಕಾಪಾಡಿಕೊಳ್ಳಲು ಪ್ರತಿ ನಮಾಜ್‌ನಲ್ಲಿ 50 ಮಂದಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಹಲವು ತಂಡಗಳನ್ನು ವಿಂಗಡಿಸಿ ನಮಾಜ್‌ ಮಾಡಲಾಯಿತು.

ಮಸೀದಿ ಒಳಪ್ರವೇಶಕ್ಕೂ ಮುನ್ನ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗಿತ್ತು. ಹಿರಿಯರು, ಮಕ್ಕಳು, ಮಹಿಳೆಯರಿಗೆ ನಮಾಜ್‌ನಲ್ಲಿ ಭಾಗವಹಿಸಲಿಲ್ಲ. ಹಾಗಾಗಿ, ಮಸೀದಿಗಳಲ್ಲಿ ದಟ್ಟಣೆ ಹೆಚ್ಚಾಗಿ ಕಂಡುಬರಲಿಲ್ಲ.

ADVERTISEMENT

ಬ್ರಹ್ಮಗಿರಿಯ ನಾಯರ್‌ಕೆರೆಯಲ್ಲಿರುವ ಹಾಶಿಮಿ ಮಸೀದಿ ಮಸೀದಿಯಲ್ಲಿ ಎರಡು ಹಂತಗಳಲ್ಲಿ ನಮಾಜ್‌ ಮಾಡಲಾಯಿತು. ಮೌಲಾನಾ ಹಾಶಿಮ್ ಉಮ್ರಿ ಈದ್ ನಮಾಜ್‌ನ ನೇತೃತ್ವ ವಹಿಸಿದ್ದಾರೆ.

ಸಂಭ್ರಮಕ್ಕೆ ಕೊರೊನಾ ಅಡ್ಡಿ:ಪ್ರತಿವರ್ಷ ಬಕ್ರೀದ್ ಹಬ್ಬದ ಸಂಭ್ರಮ ಜೋರಾಗಿರುತ್ತಿತ್ತು. ಹೊಸ ಬಟ್ಟೆ, ಆಭರಣ ಖರೀದಿ ನಡೆಯುತ್ತಿತ್ತು. ಈ ಬಾರಿ ಹಬ್ಬದ ಸಂಭ್ರಮ ಕಾಣಲಿಲ್ಲ.

ಮನೆಯಲ್ಲಿಯೇ ಖಾದ್ಯ ತಯಾರಿ:ಪ್ರತಿವರ್ಷ ಹೊರ ಜಿಲ್ಲೆ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಬಂಧುಗಳು ಹಬ್ಬಕ್ಕೆ ಬರುತ್ತಿದ್ದರು. ಕೊರೊನಾದಿಂದ ಈ ವರ್ಷ ಯಾರೂ ಬಂದಿಲ್ಲ. ಹಾಗಾಗಿ, ಮನೆಮಂದಿಗೆ ಅಗತ್ಯವಿದ್ದಷ್ಟು ಮಾಂಸದ ಖಾದ್ಯ ತಯಾರಿಸಿದ್ದೇವೆ. ಬಕ್ರೀದ್‌ ಹಬ್ಬದ ಆಚರಣೆ ಸರಳವಾಗಿ ನಡೆಯಿತು ಎಂದು ಮುಸ್ಲಿಮರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.