ADVERTISEMENT

ಉಚಿತ ಕೋವಿಡ್-19 ಮುನ್ನೆಚ್ಚರಿಕಾ ಡೋಸ್

ಜುಲೈ 18 ರಿಂದ ಸೆ.30ರವರೆಗೆ ಜಿಲ್ಲೆಯಾದ್ಯಂತ ಲಸಿಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 15:06 IST
Last Updated 17 ಜುಲೈ 2022, 15:06 IST
ಕೋವಿಡ್ ಲಸಿಕೆ
ಕೋವಿಡ್ ಲಸಿಕೆ   

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಶೇ 100 ಗುರಿ ಸಾಧಿಸಲಾಗಿದ್ದು, ಸಂಭಾವ್ಯ ನಾಲ್ಕನೇ ಅಲೆಯ ತೀವ್ರತೆ ತಗ್ಗಿಸಲು 18ವರ್ಷ ಮೇಲ್ಪಟ್ಟ ಎಲ್ಲರಿಗೂ ಮುಂಜಾಗ್ರತಾ ಡೋಸ್ ಲಸಿಕೆ ನೀಡುವ ಕಾರ್ಯಕ್ರಮ ಜುಲೈ 18ರಿಂದ ಆರಂಭವಾಗಲಿದೆ.

ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಪ್ರಯುಕ್ತ 18 ರಿಂದ 59 ವರ್ಷದವರಿಗೆ ಜುಲೈ 18ರಿಂದ ಸೆ.30ರವರೆಗೆ ಉಚಿತ ಮುನ್ನೆಚ್ಚರಿಕಾ ಡೋಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

2021ರ ಜನವರಿ 16ರಂದು ಕೋವಿಡ್-19 ಲಸಿಕಾಕರಣ ಆರಂಭವಾಗಿದ್ದು ಪ್ರಾರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತೆಯರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಯಿತು. ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು.

ADVERTISEMENT

ಈಗಾಗಲೇ 18 ವರ್ಷ ಮೇಲ್ಪಟ್ಟ 10,04,712 ಫಲಾನುಭವಿಗಳು ಮೊದಲ ಡೋಸ್ ಲಸಿಕೆ ಪಡೆದು ಶೇ 100.57 ಹಾಗೂ 10,00,092 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದು, ಶೇ 100.11 ಸಾಧನೆಯಾಗಿದ್ದು, ಮುನೆಚ್ಚರಿಕಾ ಡೋಸ್ ಪಡೆಯಲು ಜಿಲ್ಲೆಯಲ್ಲಿ 18 ರಿಂದ 59 ವರ್ಷದ 8,00,000 ಫಲಾನುಭವಿಗಳನ್ನು ಗುರುತಿಸಲಾಗಿದೆ.

ಜುಲೈ 18 ರಿಂದ 18 ವರ್ಷ ಮೇಲ್ಪಟ್ಟ, 2ನೇ ಡೋಸ್ ಲಸಿಕೆ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರಿಗೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳ ಲಸಿಕಾ ಕೇಂದ್ರದಲ್ಲಿ ಉಚಿತ ಲಸಿಕೆ ಹಾಕಲಾಗುವುದು. ಈ ಮೂಲಕ ಸ್ವಾತಂತ್ರ‍್ಯದ ಅಮೃತ ಮಹೋತ್ಸದ ಸಂಭ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.

ವಿದೇಶಕ್ಕೆ ತೆರಳುವ 18 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆದು 3 ತಿಂಗಳು ದಾಟಿದಲ್ಲಿ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯಬಹುದಾಗಿದೆ. ಸೆ.30ರ ಒಳಗೆ 18 ವರ್ಷದಿಂದ 59 ವರ್ಷದವರೆಗಿನ ಎಲ್ಲರಿಗೂ ಕೋವಿಡ್-19 ಮುನ್ನೆಚ್ಚರಿಕಾ ಲಸಿಕೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸರ್ಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮುಂದೆ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಹಳ್ಳಿಗಳಲ್ಲಿ ಹಾಗೂ ಕಾರ್ಮಿಕರು ಕಾರ್ಯ ನಿರ್ವಹಿಸುವ ಸಂಸ್ಥೆಗಳಲ್ಲಿ, ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚರಿಕಾ ಡೋಸ್ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.