ADVERTISEMENT

ಡಿಸಿ ಮನ್ನಾ ಭೂಮಿಗಳನ್ನು ದಲಿತರಿಗೆ ನೀಡಿ: ಕೆ.ಸಿ. ರಾಜು ಬೆಟ್ಟಿನಮನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:53 IST
Last Updated 19 ಜುಲೈ 2025, 5:53 IST
ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್ ಅವರನ್ನು ಶುಕ್ರವಾರ ಭೇಟಿ ಮಾಡಿದ ದಸಂಸ ಕಾರ್ಯಕರ್ತರು, ಭೂಮಿ ಮತ್ತು ವಸತಿ ಹಕ್ಕುಗಳಿಗೆ ಆಗ್ರಹಿಸಿ ಮನವಿ ನೀಡಿದರು.
ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್ ಅವರನ್ನು ಶುಕ್ರವಾರ ಭೇಟಿ ಮಾಡಿದ ದಸಂಸ ಕಾರ್ಯಕರ್ತರು, ಭೂಮಿ ಮತ್ತು ವಸತಿ ಹಕ್ಕುಗಳಿಗೆ ಆಗ್ರಹಿಸಿ ಮನವಿ ನೀಡಿದರು.   

ಕುಂದಾಪುರ: ‘ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇ 50ನ್ನು ದಲಿತ ಸಮುದಾಯಗಳಿಗೆ ಅಕ್ರಮ ಸಕ್ರಮ ಸಮಿತಿಗಳು ಮಂಜೂರು ಮಾಡಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಪ್ರಧಾನ ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ ಆಗ್ರಹಿಸಿದರು.

ಇಲ್ಲಿನ ಆಡಳಿತ ಸೌಧದ ಎದುರು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭೂಮಿ ಮತ್ತು ವಸತಿ ಹಕ್ಕು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕುಂದಾಪುರ, ಬೈಂದೂರು ಸೇರಿದಂತೆ ಜಿಲ್ಲೆಯಲ್ಲಿ ಇರುವ ಡಿಸಿ ಮನ್ನಾ ಭೂಮಿಗಳನ್ನು ಅರ್ಹ ಭೂರಹಿತ ಪ.ಜಾತಿ ಮತ್ತು ಪಂಗಡದ ಜನರಿಗೆ ಮರುಹಂಚಿಕೆ ಮಾಡಬೇಕು. ಬಡವರ 5–18 ಸೆಂಟ್ಸ್ ಭೂ ಮಂಜೂರಾತಿಗೆ ಹತ್ತೆಂಟು ಕಾರಣ ಹುಡುಕಿ ತೊಂದರೆ ನೀಡಬೇಡಿ. ಅಕ್ರಮ ಸಕ್ರಮ, 94ಸಿ, 94ಸಿಸಿಯಲ್ಲಿ ಕುಂದಾಪುರ, ಬೈಂದೂರು ತಾಲ್ಲೂಕು ಕಚೇರಿಗಳಲ್ಲಿ, ಏನಾದರೂ ಕಾರಣ ಹೇಳಿ ದಲಿತರ ಒಂದೇ ಒಂದು ಕಡತ ಮಂಜೂರಾಗುವುದಿಲ್ಲ. ಆದರೆ ಶ್ರೀಮಂತರಿಗೆ ಎಕ್ರೆಗಟ್ಟಲೆ ಭೂಮಿ ಮಂಜೂರಾಗುತ್ತದೆ. ಈ ತಾರತಮ್ಯದ ವಿರುದ್ಧ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಲಿದೆ. ದಲಿತರು ಸೇರಿದಂತೆ ಎಲ್ಲಾ ಬಡವರಿಗೆ ಭೂಮಿ, ವಸತಿ ದೊರಕಬೇಕು. ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿದ ಯಾವುದೇ ವರ್ಗದ ಬಡವರನ್ನು ಒಕ್ಕಲೆಬ್ಬಿಸದೆ ಅರ್ಹತೆ ಇದ್ದವರಿಗೆ ಭೂಮಿ ನೀಡಬೇಕು. ಕಂದಾಯ ಇಲಾಖೆ ದಲಿತರಿಗೆ ಭೂಮಿ, ದಾಖಲೆಗಳನ್ನು ನೀಡಲು ಸತಾಯಿಸಬಾರದು ಎಂದರು.

ADVERTISEMENT

ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್ ಮಾತನಾಡಿ, ದಲಿತರಿಗೆ ಭೂಮಿ ನೀಡುವ ಕುರಿತು ವಿಳಂಬ, ವಿನಾಕಾರಣ ಅರ್ಜಿ ತಿರಸ್ಕರಿಸುವುದಾಗಲಿ ಮಾಡುವಂತಿಲ್ಲ. ಸಕಾರಣವಿಲ್ಲದೆ ಅರ್ಜಿಗಳನ್ನು ಬಾಕಿ ಇಡುವಂತೆಯೂ ಇಲ್ಲ. ಈ ಕುರಿತು ತಹಶೀಲ್ದಾರ್‌ಗೆ ಸೂಚನೆ ನೀಡಲಾಗುವುದು ಎಂದರು.

ದಸಂಸ ಖಜಾಂಚಿ ಚಂದ್ರ ಕೊರ್ಗಿ, ಸಂಘಟನಾ ಸಂಚಾಲಕರಾದ ಉದಯ ಕುಮಾರ್, ಶ್ರೀಕಾಂತ್ ಹಿಜಾಣ, ಚಂದ್ರ ಉಳ್ಳೂರು, ಸತೀಶ್ ರಾಮನಗರ, ಭಾಸ್ಕರ ಆಲೂರು, ಅಶೋಕ ಮೊಳಹಳ್ಳಿ, ಪ್ರಶಾಂತ ಹೈಕಾಡಿ, ಮುಖಂಡರಾದ ಸುರೇಶ ಹಕ್ಲಾಡಿ, ಗೋಪಾಲಕೃಷ್ಣ ನಾಡ, ಭವಾನಿ ನಾಯ್ಕ, ರಾಮ ಗುಳ್ಳಾಡಿ, ದಿನೇಶ್ ಹೊಸ್ಮಠ, ಮಂಜುನಾಥ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.