ADVERTISEMENT

ಖುಮ್ಕಿ ಹಕ್ಕು ರದ್ದುಗೊಳಿಸಿ ದಲಿತರಿಗೆ ಭೂಮಿ ನೀಡಿ: ಶ್ಯಾಮರಾಜ ಬಿರ್ತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:48 IST
Last Updated 19 ಜುಲೈ 2025, 5:48 IST
ಪ್ರತಿಭಟನೆಯಲ್ಲಿ ದ.ಸಂ.ಸ. ಮುಖಂಡ ಶ್ಯಾಮರಾಜ ಬಿರ್ತಿ ತಹಶೀಲ್ದಾರ್‌ ಶ್ರೀಕಾಂತ ಹೆಗ್ಡೆ ಅವರಿಗೆ ಮನವಿ ನೀಡಿದರು
ಪ್ರತಿಭಟನೆಯಲ್ಲಿ ದ.ಸಂ.ಸ. ಮುಖಂಡ ಶ್ಯಾಮರಾಜ ಬಿರ್ತಿ ತಹಶೀಲ್ದಾರ್‌ ಶ್ರೀಕಾಂತ ಹೆಗ್ಡೆ ಅವರಿಗೆ ಮನವಿ ನೀಡಿದರು   

ಬ್ರಹ್ಮಾವರ: ‘ಜಿಲ್ಲೆಯಲ್ಲಿ ಸಾಕಷ್ಟು ಡಿಸಿ ಮನ್ನಾ ಭೂಮಿ ಇದ್ದರೂ ಜಿಲ್ಲಾಡಳಿತ ಅದನ್ನು ಭೂರಹಿತರಿಗೆ ಹಂಚುತ್ತಿಲ್ಲ. ಹೆಚ್ಚಿನ ಡಿಸಿ ಮನ್ನಾ ಭೂಮಿಯನ್ನು ಮೇಲ್ವರ್ಗದವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಭೂರಹಿತರಿಗೆ ಹಂಚಬೇಕು’ ಎಂದು ದ.ಸಂ.ಸ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ ಬಿರ್ತಿ ಹೇಳಿದರು.

ಇಲ್ಲಿನ ತಾಲ್ಲೂಕು ಕಚೇರಿ ಎದುರು ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಅಕ್ರಮ– ಸಕ್ರಮದಲ್ಲೂ ಪ.ಜಾತಿ, ಪಂಗಡದವರ ಅರ್ಜಿಗಳನ್ನು ವಿಲೇವಾರಿ ಮಾಡದೆ ಶ್ರೀಮಂತರು, ಮೇಲ್ವರ್ಗದವರಿಗೆ ಜಮೀನು ಮಂಜೂರು ಮಾಡಿದ್ದಾರೆ. ಸರ್ಕಾರಿ ಭೂಹಂಚಿಕೆ ಸಂದರ್ಭ ಶೇ 50ರಷ್ಟು ಭೂಮಿಯನ್ನು ಕೆಳವರ್ಗದವರಿಗೆ ಕಾದಿರಿಸಬೇಕೆಂಬ ಕಾನೂನು ಇದ್ದರೂ, ಅದನ್ನು ಗಾಳಿಗೆ ತೂರಿ ರಾಜಕಾರಣಿಗಳು ತಮ್ಮ ಸಮುದಾಯದವರಿಗೆ ಮಂಜೂರು ಮಾಡಿದ್ದು ಮಾಹಿತಿ ಹಕ್ಕಿನಲ್ಲಿ ದೊರಕಿದೆ ಎಂದು ದೂರಿದರು.

ಕೇವಲ ಎರಡು ಎಕ್ರೆ ಪಟ್ಟಾ ಭೂಮಿ ಹೊಂದಿರುವ ಮೇಲ್ವರ್ಗದವರು ಜಮೀನಿನ ಸುತ್ತ 5– 10 ಎಕ್ರೆ ಸರ್ಕಾರಿ ಭೂಮಿಗೆ ಬೇಲಿ ಹಾಕಿಕೊಂಡು ಅದು ನಮ್ಮ ಖುಮ್ಕಿ ಭೂಮಿ ಎಂದು ವಾದಿಸುತ್ತಿದ್ದಾರೆ. ಸರ್ಕಾರ ಮೊದಲು ಖುಮ್ಕಿ ಹಕ್ಕುಗಳನ್ನು ರದ್ದುಪಡಿಸಿ, ಖುಮ್ಕಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಭೂರಹಿತ ದಲಿತರಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಬೇಡಿಕೆ ಶೀಘ್ರ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು‌.

ADVERTISEMENT

ಮುಖಂಡ ಅಣ್ಣಪ್ಪ ಕುಕ್ಕುಡೆ, ವಾರಂಬಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್. ನಾರಾಯಣ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಹೂಹಾರ ಹಾಕುವ ಮೂಲಕ ಉದ್ಘಾಟಿಸಿದರು. ತಹಶೀಲ್ದಾರ್‌ ಶ್ರೀಕಾಂತ ಹೆಗ್ಡೆ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ, ಕುಮಾರ್ ಕೋಟ, ಮಂಜುನಾಥ ಬಾಳ್ಕುದ್ರು, ತಾಲ್ಲೂಕು ಸಂಚಾಲಕ ಹರೀಶ್ಚಂದ್ರ ಬಿರ್ತಿ, ಸಂಘಟನಾ ಸಂಚಾಲಕ ಶ್ರೀನಿವಾಸ ವಡ್ಡರ್ಸೆ, ಪ್ರಕಾಶ ಹೇರೂರು, ಸುಧಾಕರ ಮಾಸ್ತರ್ ಗುಜ್ಜರ್ ಬೆಟ್ಟು, ಬಿರ್ತಿ ಸುರೇಶ, ಪ್ರಶಾಂತ್ ಬಿರ್ತಿ, ಚೈತನ್ಯ ಬಿರ್ತಿ, ಕುಸುಮಾ ಹಂಗಾರಕಟ್ಟೆ, ಆರೂರು ಸಂಚಾಲಕ ನರಸಿಂಹ ಆರೂರು, ಶರತ್ ಆರೂರು, ಬೋಜರಾಜ್ ತಲ್ಲೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.