ADVERTISEMENT

ನೃತ್ಯ ಕಲೆ ಜೀವನದ ಅವಿಭಾಜ್ಯ ಅಂಗ

ಭರತ ಮುನಿ ಜಯಂತ್ಯುತ್ಸವದಲ್ಲಿ ಪಲಿಮಾರು ಶ್ರೀ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 15:46 IST
Last Updated 1 ಡಿಸೆಂಬರ್ 2019, 15:46 IST
ಉಡುಪಿ ಶ್ರೀಕೃಷ್ಣಮಠ ರಾಜಾಂಗಣದಲ್ಲಿ ಭಾನುವಾರ ನಡೆದ ಭರತಮುನಿ ಜಯಂತ್ಯುತ್ಸವ ಹಾಗೂ ತ್ರಿಂಶತ್‌ ವರ್ಷದ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಉದ್ಘಾಟಿಸಿದರು.
ಉಡುಪಿ ಶ್ರೀಕೃಷ್ಣಮಠ ರಾಜಾಂಗಣದಲ್ಲಿ ಭಾನುವಾರ ನಡೆದ ಭರತಮುನಿ ಜಯಂತ್ಯುತ್ಸವ ಹಾಗೂ ತ್ರಿಂಶತ್‌ ವರ್ಷದ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಉದ್ಘಾಟಿಸಿದರು.   

ಉಡುಪಿ: ‘ನೃತ್ಯ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗ. ಇದರಿಂದ ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಉದ್ದೀಪನ ಸಾಧ್ಯ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನದ 18ನೇ ವರ್ಷದ ಭರತಮುನಿ ಜಯಂತ್ಯುತ್ಸವ ಹಾಗೂ ತ್ರಿಂಶತ್‌ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರಸ್ತುತ ಹೆಚ್ಚುತ್ತಿರುವ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವನ್ನು ಕಡಿಮೆ ಮಾಡಬೇಕಾದರೆ ಭಾರತೀಯ ಕಲೆ, ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ’ ಎಂದರು.

ADVERTISEMENT

ಕರ್ಣಾಟಕ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ಬಿ. ಗೋಪಾಲಕೃಷ್ಣ ಸಾಮಗ ಮಾತನಾಡಿ, ‘ಭರತನಾಟ್ಯದಂತಹ ನೃತ್ಯ ಕಲೆಯಿಂದ ಭಾರತೀಯ ಸಂಸ್ಕೃತಿ ಉಳಿದಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಶಿರಾಜ್‌ ಕಾವೂರು ಮಾತನಾಡಿ, ‘ನಮ್ಮ ಸಂಸ್ಕಾರ, ಆಚಾರ–ವಿಚಾರ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ. ಪೋಷಕರು ತಮ್ಮ ಮಕ್ಕಳಿಗೆ ಭಾರತೀಯ ಕಲೆ, ಪರಂಪರೆಯನ್ನು ತಿಳಿಸಿಕೊಡಬೇಕು’ ಎಂದರು.

ಈ ಸಂದರ್ಭದಲ್ಲಿ ನೃತ್ಯ ಕಲಾವಿದರಾದ ಯು. ಪ್ರತೀಕ್ಷಾ, ಮಯೂರಿ ಶಶಿರಾಜ್‌, ರಾಕಾ ಅವರಿಗೆ ಗುರು ‘ರಾಧಾಕೃಷ್ಣಾನುಗ್ರಹ’ ಪ್ರಶಸ್ತಿ ಮತ್ತು ವಾಸುಕಿ ಡೆಕೋರೇಟರ್ಸ್‌ನ ನಾಗರಾಜ ಉಪಾಧ್ಯಾಯರಿಗೆ ‘ಕಲಾರ್ಪಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂಬಲಪಾಡಿ ದೇವಳದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನದ ಸಂಚಾಲಕ ಬಿ.ಮುರಳೀಧರ ಸಾಮಗ, ನೃತ್ಯ ಗುರು ವೀಣಾ ಎಂ. ಸಾಮಗ, ಸಂಗೀತ ಗುರು ಪ್ರೇಮಾ ಆರ್‌.ತಂತ್ರಿ, ಪವನ್‌ರಾಜ್‌ ಸಾಮಗ ಮತ್ತು ಪೃಥ್ವಿರಾಜ್‌ ಸಾಮಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.