ADVERTISEMENT

‘ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳಿ’

ನಾಟ್ಕದೂರು: ದಸರಾ ಮಹೋತ್ಸವದ ನವರಂಗೋತ್ಸವ, ವಿವಿಧ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:22 IST
Last Updated 28 ಸೆಪ್ಟೆಂಬರ್ 2022, 5:22 IST
ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ಕಲಾ ಸಂಘಟನೆಯ ವತಿಯಿಂದ ಸೋಮವಾರ ಆರಂಭಗೊಂಡ ದಸರಾ ಮಹೋತ್ಸವದ 22ನೇ ವರ್ಷದ ನವರಂಗೋತ್ಸವ ಮತ್ತು ನಾಟ್ಕ ಮುದ್ರಾಡಿಯ 37ನೇ ಸಂಭ್ರಮ ಮತ್ತು ಅವ್ವ ನನ್ನವ್ವ ರಂಗೋತ್ಸವದಲ್ಲಿ   ಪಟ್ಲ ಸತೀಶ ಶೆಟ್ಟಿ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ಕಲಾ ಸಂಘಟನೆಯ ವತಿಯಿಂದ ಸೋಮವಾರ ಆರಂಭಗೊಂಡ ದಸರಾ ಮಹೋತ್ಸವದ 22ನೇ ವರ್ಷದ ನವರಂಗೋತ್ಸವ ಮತ್ತು ನಾಟ್ಕ ಮುದ್ರಾಡಿಯ 37ನೇ ಸಂಭ್ರಮ ಮತ್ತು ಅವ್ವ ನನ್ನವ್ವ ರಂಗೋತ್ಸವದಲ್ಲಿ   ಪಟ್ಲ ಸತೀಶ ಶೆಟ್ಟಿ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.    

ಹೆಬ್ರಿ: ‘ಧರ್ಮ, ಕಲಾ ಸೇವೆಯ ಜೊತೆಗೆ ಮುಂದಿನ ದಿನಗಳಲ್ಲಿ ಧರ್ಮ– ಸಂಸ್ಕೃತಿ ಉಳಿಸಿ ಬೆಳೆಸುವ ಧ್ಯೇಯದೊಂದಿಗೆ ಸಂಸ್ಕೃತಿಯ ಪರಿಕಲ್ಪನೆಯ ಶಿಕ್ಷಣ ಸಂಸ್ಥೆಯನ್ನು ಮುದ್ರಾಡಿಯಲ್ಲಿ ತೆರೆಯುವ ಯೋಚನೆ ಇದೆ’ ಎಂದು ಮುದ್ರಾಡಿ ಆದಿಶಕ್ತಿ ಧರ್ಮ ಕ್ಷೇತ್ರದ ಅಧ್ಯಕ್ಷ, ರಾಜ್ಯ ಗಣಿ ಮತ್ತು ಕ್ರಷರ್‌ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದರು.

ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ಕಲಾ ಸಂಘಟನೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸೋಮ ವಾರ ಆರಂಭಗೊಂಡ ದಸರಾ ಮಹೋತ್ಸವದ 22ನೇ ವರ್ಷದ ನವರಂಗೋತ್ಸವ ಮತ್ತು ನಾಟ್ಕ ಮುದ್ರಾಡಿಯ 37ನೇ ಸಂಭ್ರಮ ಮತ್ತು ಅವ್ವ ನನ್ನವ್ವ ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುದ್ರಾಡಿ ಪುಣ್ಯ ಕ್ಷೇತ್ರ. ಸಮಾಜಮುಖಿ ಕೆಲಸದಲ್ಲಿ ಎಂದೂ ಹಿಂದೆ ನೋಡದೆ ದುಡಿಯುತ್ತಿರುವ ಧರ್ಮಾಧಿಕಾರಿ ಸುಕುಮಾರ್‌ ಮೋಹನ್‌ ಬಳಗವನ್ನು ನಾವೆಲ್ಲ ಕೈಹಿಡಿದು ಮುನ್ನಡೆಸಬೇಕು’ ಎಂದರು.

ADVERTISEMENT

ಯಕ್ಷಧ್ರುವ ಪಟ್ಲ ಫೌಡೇಷನ್‌ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಮುದ್ರಾಡಿ ದೇವಿಯ ಸನ್ನಿಧಿಯಲ್ಲಿ ನವರಾತ್ರಿಯ ಸಂಭ್ರಮದಲ್ಲಿ ನೀಡಿದ ಪ್ರಶಸ್ತಿ ನನ್ನ ಕಲಾ ಸೇವೆಗೆ ಸಂದ ದೊಡ್ಡ ಗೌರವ ಎಂದು ಹೇಳಿದರು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡ ಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್‌ ಮಾತನಾಡಿ, ಮುದ್ರಾಡಿ ಕ್ಷೇತ್ರದ ಅಭಿ ವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಸ್ತು ತಜ್ಞ ಪ್ರಮಲ್‌ಕುಮಾರ್‌, ಮುದ್ರಾಡಿಯಲ್ಲಿ ನಿತ್ಯ ಕಲಾ ಸೇವೆ ನಡೆಯಲಿ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ರಂಗ ನಟ ನಿರ್ದೇಶಕ ಗುರುಮೂರ್ತಿ ವಿ.ಎಸ್‌. ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಹಾಗೂ ಪಟ್ಲ ಸತೀಶ ಶೆಟ್ಟಿ, ರಾಜಶೇಖರ ಕೋಟ್ಯಾನ್‌, ಉದ್ಯಮಿ ದೊಂಡೆರಂಗಡಿ, ಪಂಚಮಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ದೊಂಡೆರಂಗಡಿ ಪುರಂದರ ಪೂಜಾರಿ ಪೂನ ಅವರಿಗೆ ‘ಕರ್ಣಾಟ ನಾಡ ಪೋಷಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಕ್ಕಳ ನೃತ್ಯ ಸ್ಪರ್ಧೆ, ಶಾಲಾ ಮಕ್ಕಳ ಯಕ್ಷಗಾನ ತಾಳಮದ್ದಳೆ, ಪಟ್ಲ ಫೌಂಡೇಷನ್‌ ತಂಡದವರಿಂದ ಯಕ್ಷಗಾನಮೃತ ನಡೆಯಿತು.

ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಮುದ್ರಾಡಿ, ಸಂಘಟನೆಯ ಅಧ್ಯಕ್ಷ, ಕ್ಷೇತ್ರದ ಧರ್ಮಾಧಿಕಾರಿ ಸುಕುಮಾರ್‌ಮೋಹನ್‌ ಇದ್ದರು. ನಳಿನಿ ಎಸ್‌. ಸುವರ್ಣ ನಿರೂಪಿಸಿದರು.

ಆದಿಶಕ್ತಿ ದೇವಸ್ಥಾನದಲ್ಲಿ ದಸರಾ

ಮುದ್ರಾಡಿ ನಾಟ್ಕದೂರು ಆದಿಶಕ್ತಿ ದೇವಸ್ಥಾನದಲ್ಲಿ 9 ದಿನಗಳ ದಸರಾ ಮಹೋತ್ಸವ ಸೋಮವಾರ ಆರಂಭಗೊಂಡಿತು. ದುರ್ಗಾ ಹೋಮ ಹಾಗೂ ಚಂಡಿಕಾ ಹೋಮ ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು. ಕ್ಷೇತ್ರದ ಧರ್ಮಾಧಿಕಾರಿ ಸುಕುಮಾರ್‌ಮೋಹನ್‌, ಕಮಲಾ ಮೋಹನ್‌, ಸುಧೀಂದ್ರ ಮೋಹನ್‌, ಸುರೇಂದ್ರ ಮೋಹನ್‌, ಉಮೇಶ್‌ ಕಲ್ಮಾಡಿ ಸಹಿತ ಭಕ್ತರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.