ADVERTISEMENT

ಮರಳು ತೆಗೆಯದಿದ್ದರೆ ಪರವಾನಗಿ ಶಾಶ್ವತ ರದ್ದು: ಜಿಲ್ಲಾಧಿಕಾರಿ ಪ್ರಿಯಾಂಕ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 14:31 IST
Last Updated 19 ಡಿಸೆಂಬರ್ 2018, 14:31 IST
ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ
ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ   

ಉಡುಪಿ: ಜಿಲ್ಲೆಯಲ್ಲಿ ಮರಳು ತೆಗೆಯಲು ಪರವಾನಗಿ ಪಡೆದ ಪರವಾನಗಿದಾರರು ಮರಳು ದಿಬ್ಬಗಳನ್ನು ತೆರವುಗೊಳಿಸದಿದ್ದರೆ ನೋಟಿಸ್‌ ನೀಡಲಾಗುವುದು. ಅಗತ್ಯಬಿದ್ದರೆ ಶಾಶ್ವತವಾಗಿ ಮರಳು ಪರವಾನಗಿ ರದ್ದುಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಎಚ್ಚರಿಕೆ ನೀಡಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳ ತೆರವಿಗೆ 44 ಪರವಾನಗಿದಾರರು ಅರ್ಜಿ ಹಾಕಿದ್ದು, 33 ಮಂದಿ ರಾಜಧನ ಪಾವತಿಸಿ ಪರವಾನಗಿ ಪಡೆದುಕೊಂಡಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಮರಳು ತೆಗೆಯುತ್ತಿದ್ದು, ಉಳಿದವರು ಮರಳು ತೆಗೆಯುತ್ತಿಲ್ಲ ಎಂದರು.

ಮರಳುಗಾರಿಕೆ ಆರಂಭಿಸಲು ಡಿ.17ರವರೆಗೆ ಗಡುವು ನೀಡಲಾಗಿತ್ತು. ಅದರಂತೆ ಪರವಾನಗಿಗೆ ಪಡೆದ ಕೆಲವರು ದಕ್ಕೆ, ದೋಣಿ, ರಸ್ತೆ ಸಮಸ್ಯೆಗಳನ್ನು ನಿವಾರಿಸಿಕೊಂಡು ಮಂಗಳವಾರರಿಂದ ಸ್ವರ್ಣ ನದಿಯಲ್ಲಿ ಮರಳು ತೆಗೆಯಲು ಶುರುಮಾಡಿದ್ದಾರೆ. ಆದರೆ, ಪೂರ್ಣ ಪ್ರಮಾಣದಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭವಾಗಿಲ್ಲ ಎಂದರು.

ADVERTISEMENT

ಪರವಾನಗಿ ಪಡೆದೂ ಮರಳು ತೆಗೆಯದವರನ್ನು ಗುರುತಿಸಿ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಮರಳಿನ ಧಕ್ಕೆ ಸಿಕ್ಕಿಲ್ಲ, ಧಕ್ಕೆ ನಿರ್ಮಾಣ ಮಾಡಲು ಕೆಲವು ಕಡೆ ವಿರೋಧ ವ್ಯಕ್ತವಾಗಿದೆ ಎಂದು ಕಾರಣಗಳನ್ನು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿ ತಿಳಿಸಿದರು.

ಪರವಾನಗಿ ಪಡೆದವರು ಮರಳು ತೆಗೆಯಲೇಬೇಕು. ಕೆಲವು ದಿನಗಳವರೆಗೂ ಕಾಯುತ್ತೇವೆ. ಆರಂಭಿಸದಿದ್ದರೆ 7 ಸದಸ್ಯರ ಸಮಿತಿಯಲ್ಲಿ ಚರ್ಚಿಸಿ ಪರವಾನಗಿಯನ್ನು ಶಾಶ್ವತವಾಗಿ ರದ್ದುಮಾಡಲಾಗುವುದು. ಇಲ್ಲವಾದರೆ, ಪರ್ಮಿಟ್‌ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಜಿಲ್ಲಾಡಳಿತ ಅವಕಾಶ ಕೊಡುವುದಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

ಈಗ ಗುರುತಿಸಿರುವ 14 ಸಾವಿರ ಮೆಟ್ರಿಕ್‌ ಟನ್‌ 15 ದಿನಗಳಲ್ಲಿ ಖಾಲಿಯಾಗಲಿದೆ. ನಾನ್‌ ಸಿಆರ್‌ಝೆಡ್‌ ಹಾಗೂ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭಿಸಿದ್ದರಿಂದ ಸಮಸ್ಯೆಯಾಗಿದೆ. ಶೀಘ್ರವೇ ಅಧಿಕಾರಿಗಳ ತಂಡ 2ನೇ ಹಂತದ ಬೆಥಮೆಟ್ರಿಕ್ ಸರ್ವೆ ನಡೆಸಿ, ಮರಳು ದಿಬ್ಬಗಳನ್ನು ಗುರುತಿಸಲಿದೆ ಎಂದರು.

ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ದೊರೆಯುವ ಶೇ 10 ಮರಳನ್ನು ನಿರ್ಮಿತಿ ಕೇಂದ್ರದಿಂದ ಖರೀದಿ ಮಾಡಲಾಗುತ್ತಿದೆ. ಒಂದು ಲೋಡ್‌ಗೆ ₹ 6,500 ಬೆಲೆ ಕೊಟ್ಟು ಖರೀದಿಸಿ ನೇಜಾರಿನ ಸಂಗ್ರಹಾಗಾರದಲ್ಲಿ ಶೇಖರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಮರಳಿನ ಬೆಲೆ ಹೆಚ್ಚಳವಾಗುವುದನ್ನು ತಡೆಯಲು ಈ ತಂತ್ರ ರೂಪಿಸಲಾಗಿದೆ. ಸಂಗ್ರಹಾಗಾರದಲ್ಲಿರುವ ಮರಳನ್ನು ನಿರ್ಮಿತಿ ಕೇಂದ್ರದ ಮೂಲಕ ನಾಗರಿಕರಿಗೆ ಮಾರಾಟ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.