ADVERTISEMENT

ಜಿಎಸ್‌ಟಿ, ತೆರಿಗೆ ವಿರುದ್ಧ ಹೋರಾಟಕ್ಕೆ ನಿರ್ಧಾರ

ಶೈಕ್ಷಣಿಕ ಕಾರ್ಯಾಗಾರದಲ್ಲಿ ಅಧ್ಯಕ್ಷೆ ಕೆ. ಲಲಿತ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 11:26 IST
Last Updated 2 ನವೆಂಬರ್ 2019, 11:26 IST
ಶನಿವಾರ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಉದ್ಘಾಟಿಸಿದರು.ಪ್ರಜಾವಾಣಿ ಚಿತ್ರ
ಶನಿವಾರ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಉದ್ಘಾಟಿಸಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ವಿಧಿಸಿರುವ ಜಿಎಸ್‌ಟಿ ಹಾಗೂ ತೆರಿಗೆಯಿಂದ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿಯ ಅಧ್ಯಕ್ಷೆ ಕೆ. ಲಲಿತ ಜಿ.ಟಿ. ದೇವೇಗೌಡ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಹಾಗೂ ಉಡುಪಿ ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯೊಳಪಡುವ ಎಲ್ಲಾ ಜಿಲ್ಲೆಗಳ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಎಸ್‌ಟಿ ಹಾಗೂ ತೆರಿಗೆಯಿಂದ ಸಹಕಾರಿ ಸಂಘಗಳಿಗೆ ಆಗುತ್ತಿರುವ ಸಮಸ್ಯೆ ಕುರಿತಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಅವರನ್ನು ಭೇಟಿಯಾಗಿ ಮನವರಿಕೆ ಮಾಡಲಾಗುವುದು. ಹಾಗೆಯೇ ಪತ್ತಿನ ಸಂಘಗಳ ಮಹಾಮಂಡಳ, ಮಾರಾಟ ಮಹಾಮಂಡಳ ಹಾಗೂ ಎಲ್ಲ ಫೆಡರೇಶನ್‌ಗಳ ಅಧ್ಯಕ್ಷರುಗಳನ್ನು ಒಗ್ಗೂಡಿಸಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಇದಕ್ಕೆ ಎಲ್ಲ ಸಹಕಾರಿ ಸಂಘಗಳು ಬೆಂಬಲ ನೀಡಬೇಕು ಎಂದರು.

ADVERTISEMENT

ಕಾರ್ಯಾಗಾರವನ್ನು ಉದ್ಘಾಟಿಸಿ ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಮಾತನಾಡಿ, ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ಸರ್ಕಾರದ ಕಾಯ್ದೆ, ಕಾನೂನು ಸಹಕಾರಿ ಸಂಘಗಳು ಪೂರ್ಣ ಪ್ರಮಾಣದಲ್ಲಿ ಜನರ ಸೇವೆ ಮಾಡಲು ತಡೆಯೊಡ್ಡುತ್ತಿವೆ. ಸಹಕಾರಿ ಸಂಘಗಳಿಗೆ ಒಂದು ಕಡೆ ಪ್ರೋತ್ಸಾಹ ನೀಡುವ ಸರ್ಕಾರ, ಇನ್ನೊಂದೆಡೆ ಕಾಯಿದೆ ಕಾನೂನುಗಳ ಮೂಲಕ ಸಹಕಾರಿ ಸಂಘಗಳ ವ್ಯವಹಾರಕ್ಕೆ ಕಡಿವಾಣ ಹಾಕುತ್ತಿದೆ ಎಂದು ದೂರಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸರ್ಕಾರದ ಕೆಲವೊಂದು ಧೋರಣೆ ಹಾಗೂ ತಪ್ಪು ಗ್ರಹಿಕೆಯಿಂದ ಸಹಕಾರಿ ಸಂಘಗಳಿಗೆ ಪೆಟ್ಟುಬಿದ್ದಿದೆ. ಸಹಕಾರಿ ಸಂಸ್ಥೆಯ ಕಾಯ್ದೆ ಕಾನೂನಿನ ಚೌಕಟ್ಟಿನೊಳಗೆ ವ್ಯವಹಾರಕ್ಕೆ ತೊಂದರೆ ಆಗದಂತೆ ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂಬುವುದನ್ನು ಸಹಕಾರಿ ಸಂಘಗಳ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ತಿಳಿದುಕೊಳ್ಳುವ ಅಗತ್ಯವಿದೆ. ಆಡಳಿತಾತ್ಮಕ ತಿಳುವಳಿಕೆಯನ್ನು ಪಡೆದುಕೊಂಡರೆ ಮಾತ್ರ ವ್ಯವಸ್ಥಿತ ರೀತಿಯಲ್ಲಿ ಸಹಕಾರಿ ಚಳುವಳಿಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ ಎಂದರು.

ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿಯ ನಿರ್ದೇಶಕರಾದ ಚಿತ್ತರಂಜನ್‌ ಬೋಳಾರ್‌, ಸಂಜಯ ಹೊಸಮಠ, ಸಲಹೆಗಾರ ಕೆ.ಎಸ್‌. ಗುರುಪ್ರಸಾದ್‌, ಬಡಗುಬೆಟ್ಟು ಸೊಸೈಟಿಯ ಉಪಾಧ್ಯಕ್ಷ ಎಲ್. ಉಮಾನಾಥ, ಜಯಾನಂದ, ಜಯಶೆಟ್ಟಿ, ಗಾಯತ್ರಿ ಎಸ್‌. ಭಟ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.