ಕಾರ್ಕಳ: ನಗರದ ಬಹುತೇಕ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾಹನ ಸವಾರರಿಗೆ ಸಂಚರಿಸುವುದೇ ದುಸ್ತರವೆನಿಸಿದೆ. ಮಳೆ ಬಂದರೆ ರಸ್ತೆ ಹೊಂಡಗಳಲ್ಲಿ ನೀರು ತುಂಬಿ ನಡೆದಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕಾರ್ಕಳ ಮಾರ್ಕೆಟ್‌ನಿಂದ ಸಾಗುವ ಪೆರ್ವಾಜೆ ರಸ್ತೆಯುದ್ದಕೂ ಕಾಲು ದಾರಿಯೇ ಇಲ್ಲದಂತೆ ರಸ್ತೆ ಗುಂಡಿಮಯವಾಗಿದೆ. ಇಲ್ಲಿ ದ್ವಿಚಕ್ರ ವಾಹನ ಸವಾರರು ಸಾಗುವುದು ಕಷ್ಟಕರವಾಗಿದೆ. ಮಳೆ ನೀರು ಹೊಂಡಗಳಲ್ಲಿ ತುಂಬಿ ಎಲ್ಲಿ ಹೊಂಡ, ಎಲ್ಲಿ ರಸ್ತೆ ಎಂಬುದೇ ತಿಳಿಯುವುದಿಲ್ಲ. ಚಿಕ್ಕ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವ ತಾಯಂದಿರ ಪಾಡು ಹೇಳ ತೀರದಾಗಿದೆ.
ವೆಂಕಟರಮಣ ದೇವಸ್ಥಾನದಿಂದ ಬಸ್ ನಿಲ್ದಾಣದ ತನಕ ಸಾಗುವ ರಥಬೀದಿಯಲ್ಲಿ ದುರಸ್ತಿ ಮಾಡಿದ ಮ್ಯಾನ್ ಹೋಲ್‌ಗಳನ್ನು ರಸ್ತೆಗೆ ಸರಿಯಾಗಿ ಸಮತಟ್ಟುಗೊಳಿಸದಿರುವುದರಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಇದರ ಜೊತೆಗೆ ಮಲ್ಲಿಗೆ ಓಣಿಯ ಎದುರು ಪೈಪ್‌ಲೈನ್ ಕೊರೆದಿರುವುದನ್ನೂ ಸಹ ಸರಿಯಾಗಿ ಮುಚ್ಚಿಲ್ಲ.
ನಗರದ ಬಸ್ ನಿಲ್ದಾಣದಿಂದ ಅನಂತಶಯನ ತನಕ ಸಾಗುವ ರಸ್ತೆಯಲ್ಲಿ ಪವನ್ ಜುವೆಲ್ಲರಿ, ಆಶೋಕ್ ಸ್ವೀಟ್ಸ್ ನ ಎದುರು ಅಲ್ಲಲ್ಲಿ ರಸ್ತೆಯಲ್ಲಿ ಅಡ್ಡಕ್ಕೆ ಅರ್ಧ ರಸ್ತೆ ಸೀಳಿದ ಹೊಂಡಗಳಿದ್ದು, ನೇರ ಸಾಗುವ ವಾಹನ ಸವಾರರಿಗೆ ತಿಳಿಯದೇ ತೊಂದರೆಯಾಗುತ್ತಿದೆ. ಈ ರಸ್ತೆಯ ಅಂಗಡಿಗಳ ಎದುರು ಪೈಪ್‌ಲೈನ್‌ಗಾಗಿ ಚರಂಡಿ ಅಗೆದು, ಅದರ ಮೇಲೆ ಕೆಂಪು ಮಣ್ಣು ಹಾಸಿದ ಪರಿಣಾಮ ರಸ್ತೆಯ ಪಕ್ಕ ರಾಡಿಯೆದ್ದಿತ್ತು. ಈಚೆಗೆ ಅದರ ಮೇಲೆ ಹಾಸಿದ ಕಪ್ಪು ಜಲ್ಲಿಕಲ್ಲುಗಳು ಅಸ್ತವ್ಯಸ್ತವಾಗಿ ಹರಡಿಕೊಂಡಿವೆ.
ಅನಂತಶಯನ ವೃತ್ತದ ಹಿಂಭಾಗದಲ್ಲಿ ರಸ್ತೆ ಹೊಂಡಮಯವಾಗಿದೆ. ವೃತ್ತದ ಒಂದು ಭಾಗದಲ್ಲಿ ಪದ್ಮಾವತಿ ದೇವಸ್ಥಾನದ ಮೂಲೆಯಿಂದ ರಸ್ತೆಯ ಮಧ್ಯಭಾಗದ ತನಕ ಅಗೆಯಲಾಗಿದ್ದು ಸರಿಯಾಗಿ ಮುಚ್ಚದೇ ಇರುವುದರಿಂದ ಜಲ್ಲಿ ಕಲ್ಲುಗಳು ಚದುರಿ ಸಂಚಾರ ದುಸ್ತರವಾಗಿದೆ.
ವೃತ್ತದ ಹಿಂಭಾಗದಲ್ಲಿ ಹೊಂಡಗಳಿದ್ದು ಮಳೆ ನೀರು ತುಂಬಿ ದ್ವಿಚಕ್ರ ವಾಹನ ಸವಾರರು ಎಡವಿ ಬೀಳುವ ಸಂಭವವಿದೆ. ದಿನಾಲೂ ಸಾವಿರಾರು ಮಂದಿ ಓಡಾಡುವ ತೆಳ್ಳಾರು ಕಡೆಗೆ ಸಾಗುವ ರಸ್ತೆ ಸಂಚಾರವೆಂದರೆ ಎದ್ದು ಬಿದ್ದು ಸಾಗುವಂತಾಗಿದೆ.
ಇಲ್ಲಿ ರಸ್ತೆಗೆ ತಾತ್ಕಾಲಿಕವಾಗಿ ಹಾಕಿದ ತೇಪೆಯೂ ಸರಿಯಾಗಿ ನಿಲ್ಲದೇ ರಸ್ತೆ ತುಂಬಾ ಉಬ್ಬು ತಗ್ಗುಗಳು ಉಂಟಾಗಿ ನಡೆದುಕೊಂಡು ಸಾಗುವುದೂ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.
ಆನೆಕೆರೆಯಿಂದ ಗೊಮ್ಮಟ ಬೆಟ್ಟದತ್ತ ಸಾಗುವ ಕಾಂಕ್ರಿಟ್ ರಸ್ತೆಯಲ್ಲಿ ಪೈಪ್‌ಲೈನ್‌ಗಾಗಿ ಅಲ್ಲಲ್ಲಿ ರಸ್ತೆಯನ್ನು ಕಡಿದು ಹಾಗೇ ಬಿಡಲಾಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರು ವಾಹನ ಸಮೇತ ರಸ್ತೆಗೆ ಬಿದ್ದು ಪೆಟ್ಟು ಮಾಡಿಕೊಂಡದ್ದಿದೆ ಎನ್ನುತ್ತಾರೆ ಸಾರ್ವಜನಿಕರು.
ಈಗ ಆ ಹೊಂಡದಲ್ಲಿ ಅವೈಜ್ಞಾನಿಕವಾಗಿ ಕಪ್ಪು ಜಲ್ಲಿಯನ್ನು ತುಂಬಿಸಿದ್ದು, ಮೊದಲಿಗಿಂತ ಹೆಚ್ಚು ಸಮಸ್ಯೆ ಉದ್ಭವವಾಗಿದೆ. ತುಂಬಿಸಿದ ಜಲ್ಲಿ ರಾಶಿಯನ್ನು ಸಮತಟ್ಟುಗೊಳಿಸದೇ ಸುರಿದ ಪರಿಣಾಮ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಜನರು .
ಆನೆಕೆರೆ, ಕೃಷ್ಣಕ್ಷೇತ್ರದಿಂದ ಎಪಿಎಂಸಿ ಕಡೆಗೆ ಸಾಗುವ ರಸ್ತೆಯಲ್ಲಿ ನಾಲ್ಕು ಮಾರ್ಗ ಕೂಡುವಲ್ಲಿ ಅಗಲವಾಗಿ ಅಗೆದಿರುವುದನ್ನು ಸರಿಯಾಗಿ ಮುಚ್ಚದೇ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಈಚೆಗೆ ಕಾರ್ಕಳ ಪುರಸಭಾ ಸಭಾಂಗಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಗರದ ರಸ್ತೆಗಳ ದುಃಸ್ಥಿತಿಯನ್ನು ವಿರೋಧಿಸಿ ವಿಪಕ್ಷ ಸದಸ್ಯರು ಧರಣಿ ನಡೆಸಿ ರಸ್ತೆ ಸಮಸ್ಯೆ ಶೀಘ್ರವಾಗಿ ಪರಿಹರಿಸುವಂತೆ ಮನವಿ ಮಾಡಿದ್ದರು.
ನಗರದಲ್ಲಿ ನವೆಂಬರ್ ತಿಂಗಳಲ್ಲಿ ಆರಂಭಿಸಬೇಕಾದ ಅಮೃತ್ ಯೋಜನೆಯ ನೀರು ಸರಬರಾಜು ಪೈಪ್ ಅಳವಡಿಕೆ ಮೇ ಆರಂಭದಲ್ಲಿ ಶುರುವಾಗಿರುವುದು ಹೆಚ್ಚಿನ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎಂದು ಜನರು ದೂರುತ್ತಾರೆ.
ಪಾದಚಾರಿಗಳಿಗೆ ಕಾರ್ಕಳ ನಗರದ ಕೆಲವು ರಸ್ತೆಗಳಲ್ಲಿ ನಡೆದಾಡಲು ಸಮಸ್ಯೆಯಾಗುತ್ತಿದೆ. ರಿಕ್ಷಾದಲ್ಲಿ ಬಾಡಿಗೆಗೆ ತೆರಳಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಸಂಬಂಧಪಟ್ಟವರು ಗಮನ ಹರಿಸಬೇಕುಸತೀಶ್ ರಿಕ್ಷಾ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.