ADVERTISEMENT

ಉಚ್ಚಿಲ ಬಡಾ ಗ್ರಾ.ಪಂ: ₹37 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ 

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 4:15 IST
Last Updated 12 ಡಿಸೆಂಬರ್ 2025, 4:15 IST
ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹ 37 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು 
ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹ 37 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು    

ಪಡುಬಿದ್ರಿ:ಸಮೀಪದ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೂರು ಗ್ರಾಮದ ಅದಾನಿ ಪವರ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಡಿ ಸುಮಾರು ₹ 37 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಕಂಪನಿಯ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಬಡಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ₹17 ಲಕ್ಷ ವೆಚ್ಚದಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ, ₹20 ಲಕ್ಷದಲ್ಲಿ ಮಾರುಕಟ್ಟೆ ವಿಸ್ತರಣೆ, ಸಾರ್ವಜನಿಕ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿ, ಗ್ರಾಮೀಣ ಸಮುದಾಯಗಳ ಸಬಲೀಕರಣ ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಕೃಷಿ ಮೂಲ ಸೌಕರ್ಯವನ್ನು ಬಲಪಡಿಸುವುದು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಅವಶ್ಯಕ. ಹೊಸ ಮಾರುಕಟ್ಟೆ ರೈತರಿಗೆ ಹೆಚ್ಚು ಆದಾಯ ಮತ್ತು ಪಾರದರ್ಶಕ ಮಾರಾಟ ವ್ಯವಸ್ಥೆಯನ್ನು ಒದಗಿಸುವ ಮೂಲಕ ಮಹತ್ವದ ಪ್ರಯೋಜನ ನೀಡಲಿದೆ ಎಂದರು.

ADVERTISEMENT

ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ₹1.51 ಕೋಟಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿದ್ದು, ಗ್ರಾಮಸ್ಥರ ಉಪಯೋಗಕ್ಕೆ ಸಮರ್ಪಿಸಲಾಗಿದೆ ಎಂದರು.

ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮೆಂಡನ್ ಮಾತನಾಡಿ, ಹಲವು ವರ್ಷಗಳಿಂದ ಸ್ಥಳೀಯರಿಂದ ಬೇಡಿಕೆಯಾಗಿದ್ದ ಆಧುನಿಕ ಮಾರುಕಟ್ಟೆ ಯಾರ್ಡ್ ನಿರ್ಮಾಣವನ್ನು ಅದಾನಿ ಸಿಎಸ್‌ಆರ್ ನಿಧಿ ನೆರವಿನಿಂದ ನೆರವೇರಿಸಲಾಗಿದೆ. ಇದು ರೈತರಿಗೂ, ವ್ಯಾಪಾರಿಗಳಿಗೂ ಹೆಚ್ಚು ಸುಗಮ, ಸುಸ್ಥಿರ ಮತ್ತು ಪಾರದರ್ಶಕ ಮಾರುಕಟ್ಟೆ ವಾತಾವರಣ ಒದಗಿಸಲಿದೆ ಎಂದು ಹೇಳಿದರು.

ಪಂಚಾಯತ್ ಸದಸ್ಯರಾದ ಇಂದಿರಾ ಶೆಟ್ಟಿ, ಅಬ್ದುಲ್ ಮಜೀದ್, ಶಕುಂತಲಾ, ನಿರ್ಮಲಾ, ರಜಾಕ್, ಮೋಹಿನಿ ಸುವರ್ಣ, ಕಲಾವತಿ, ತಾಲೂಕು ಪಂಚಾಯತ್ ಮಾಜಿ ಸದ್ಯಸ್ಯ ಯು.ಸಿ.ಶೇಕಬ್ಬ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ, ಪಂಚಾಯಿತಿ ಸಿಬ್ಬಂದಿ ಶಶಿಕಾಂತ್ ಕುಮಾರ್, ಅದಾನಿ ಪವರ್ ಲಿಮಿಟೆಡ್‌ನ ರವಿ ಆರ್.ಜೇರೆ, ಅದಾನಿ ಫೌಂಡೇಷನ್‌ನ ಅನುದೀಪ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.