ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆಗೆ ದಣಿವರಿಯದ ದುಡಿತ

ಸಿಡಬ್ಲ್ಯುಸಿ, ನಮ್ಮಭೂಮಿ ಸಂಸ್ಥೆಯ ಸಂಸ್ಥಾಪಕ ದಾಮೋದರ ಆಚಾರ್ಯ ನಿಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 12:55 IST
Last Updated 25 ನವೆಂಬರ್ 2020, 12:55 IST
ದಾಮೋದರ ಆಚಾರ್ಯ
ದಾಮೋದರ ಆಚಾರ್ಯ   

ಉಡುಪಿ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಿಡಬ್ಲ್ಯುಸಿ (ದುಡಿಯವ ಮಕ್ಕಳ ಕಾಳಜಿ ಸಂಘಟನೆ), ‘ನಮ್ಮ ಭೂಮಿ’ ಸಂಸ್ಥೆ ಹುಟ್ಟುಹಾಕಿ ದಶಕಗಳಿಂದ ಹೋರಾಟ ನಡೆಸುತ್ತ ಬಂದಿದ್ದ ಬಿ.ದಾಮೋದರ ಆಚಾರ್ಯ ಬುಧವಾರ ನಿಧನರಾದರು.

ಮೂಲತಃ ಕುಂದಾಪುರ ತಾಲ್ಲೂಕಿನ ಬಸ್ರೂರಿನ ಮೂಡುಕೆರೆಯವರಾದ ದಾಮೋದರ ಆಚಾರ್ಯ ಬೆಂಗಳೂರಿನಲ್ಲಿ ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದ ಮಕ್ಕಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ‘ಗ್ರಾಮಾಶ್ರಮ’ ಸಂಸ್ಥೆ ಹುಟ್ಟುಹಾಕಿದ್ದರು. ಹಳ್ಳಿಬಿಟ್ಟು ಪಟ್ಟಣದ ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದ ಮಕ್ಕಳಿಗೆ ಸ್ವಉದ್ಯೋಗ ತರಬೇತಿ ನೀಡುವಲ್ಲಿ ಸಂಸ್ಥೆ ಸಾಕಷ್ಟು ಕೆಲಸ ಮಾಡಿದೆ.

ಅದೇರೀತಿ ಕುಂದಾಪುರದ ಕನ್ಯಾನದಲ್ಲಿ ‘ನಮ್ಮ ಭೂಮಿ’ ಸಂಸ್ಥೆ ಹುಟ್ಟುಹಾಕಿ ಶಿಕ್ಷಣದಿಂದ ವಂಚಿತರಾಗಿದ್ದ ಬಡ ಹಾಗೂ ವಲಸೆ ಕೂಲಿ ಕಾರ್ಮಿಕರ ಮಕ್ಕಳಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡಲು ವೃತ್ತಿ ತರಬೇತಿ ಸಂಸ್ಥೆ ಆರಂಭಿಸಿದ್ದರು. ನಾಲ್ಕು ದಶಕಗಳ ಅವಧಿಯಲ್ಲಿ ‘ನಮ್ಮಭೂಮಿ’ ಸಂಸ್ಥೆಯಿಂದ ತರಬೇತಿ ಪಡೆದ ಸಾವಿರಾರು ಮಕ್ಕಳು ಬದುಕು ರೂಪಿಸಿಕೊಂಡಿದ್ದಾರೆ.

ADVERTISEMENT

ಸರ್ಕಾರ ಗ್ರಾಮ ಪಂಚಾಯಿತಿ ಅಧಿಕಾರ ಮೊಟಕುಗೊಳಿಸಿ ಆಶ್ರಯ ಮನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಅಧಿಕಾರವನ್ನು ಶಾಸಕರ ಸಮಿತಿಗೆ ವಹಿಸಿದಾಗ ಅದರ ವಿರುದ್ಧ ಧನಿ ಎತ್ತಿ, ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ಆರಂಭಿಸಿ 5,629 ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ಒಕ್ಕೂಟ ರಚನೆ ಮಾಡಿದ್ದರು. ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕರಡು ಪ್ರತಿ ಸಿದ್ಧವಾಗಿದ್ದು ಕೂಡ ದಾಮೋದರ ಆಚಾರ್ಯ ಅವರ ಮುಂದಾಳತ್ವದಲ್ಲಿ ಎಂಬುದು ವಿಶೇಷ.

ಸದ್ಭಾವನ ವೇದಿಕೆ ನಿರ್ಮಾಣ:

ಮತೀಯ ಗಲಭೆಗಳ ನಿಯಂತ್ರಣಕ್ಕೆ ಕುಂದಾಪುರದಲ್ಲಿ ಎಲ್ಲ ಧರ್ಮಗಳ ಮುಖಂಡರನ್ನೊಳಗೊಂಡ ಸದ್ಭಾವನಾ ವೇದಿಕೆ ನಿರ್ಮಾಣ ಮಾಡಿ ಸರ್ವಧರ್ಮ ಸಮನ್ವಯಕ್ಕೆ ಶ್ರಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.