ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ನಿತ್ಯಪೂಜೆಗಾಗಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಬೆಳ್ಳಿಯ ಪರಿಕರಗಳನ್ನು ಸಮರ್ಪಿಸಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಳಿಸಿಕೊಟ್ಟ ಪೂಜಾ ಪರಿಕರಗಳನ್ನು ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರು, ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ವಿಶ್ವಪ್ರಸನ್ನತೀರ್ಥ ಶ್ರೀಗಳಿಗೆ ಇಲ್ಲಿಯ ಪೇಜಾವರ ಮಠದಲ್ಲಿ ಸೋಮವಾರ ಹಸ್ತಾಂತರಿಸಿದರು.
ರಾಮನ ಪೂಜೆಗೆ ಬಳಕೆಯಾಗುವ ಬೆಳ್ಳಿ ಬಿಂದಿಗೆ (ಕಲಶ), ಅಭಿಷೇಕ ಶಂಖ, ತಟ್ಟೆ, ಲೋಟಗಳು, ಆರತಿ, ರಜತ ಬೀಸಣಿಗೆ, ಗಂಟೆ, ಅಭಿಷೇಕ ತೀರ್ಥಪಾತ್ರೆಯನ್ನೊಳಗೊಂಡ ಪರಿಕರಗಳನ್ನು ನೀಡಲಾಯಿತು.
ಪೂಜಾ ಪರಿಕರಗಳನ್ನು ಸ್ವೀಕರಿಸಿದ ಪೇಜಾವರ ಶ್ರೀ, ‘ಶ್ರೀರಾಮ ಮತ್ತು ಶಿವನ ಅನ್ಯೋನ್ಯತೆಯ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ವಿಷ್ಣು ಸಹಸ್ರನಾಮಕ್ಕೆ ಸಮನಾದ ಶ್ರೀರಾಮ ನಾಮವನ್ನು ಸ್ವತಃ ಶಿವನೇ ಸತಿಯಾದ ಪಾರ್ವತಿಗೆ ಉಪದೇಶಿಸಿದ್ದಾನೆ. ಪ್ರಸಿದ್ಧ ಶಿವನ ಕ್ಷೇತ್ರವಾದ ಧರ್ಮಸ್ಥಳ ಕ್ಷೇತ್ರಕ್ಕೂ ಅಯೋಧ್ಯೆ ಶ್ರೀರಾಮನ ಸನ್ನಿಧಿಗೂ ಅವಿನಾಭಾವ ಸಂಬಂಧವಿದ್ದು ಇದು ಮತ್ತಷ್ಟು ವೃದ್ಧಿಯಾಗಲಿ’ ಎಂದು ಆಶಿಸಿದರು.
ಧರ್ಮಸ್ಥಳದ ಪ್ರಧಾನ ಅರ್ಚಕ ರಾಮಕೃಷ್ಣ ಕಲ್ಲೂರಾಯ, ಮಣೆಗಾರ ವಸಂತ ಮಂಜಿತ್ತಾಯ, ಪರೀಕ ಸೌಖ್ಯವನ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ ಕುಮಾರ್, ಪ್ರದೀಪ ಕುಮಾರ್ ಕಲ್ಕೂರ, ಯಕ್ಷಗಾನ ಕಲಾರಂಗದ ಮಾಜಿ ಅಧ್ಯಕ್ಷ ಗಣೇಶ ರಾವ್, ಪೇಜಾವರ ಮಠದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.