ಹೆಬ್ರಿ:‘ಜೀವನ ಬಟ್ಟೆ ಇದ್ದ ಹಾಗೆ. ಕೊಳೆ ಆದರೆ ತೊಳೆಯುತ್ತೇವೆ. ಹರಿದರೆ ಹೊಲಿಯುತ್ತೇವೆ. ಯಾವುದೇ ಸಂಕಷ್ಟಗಳು ಬಂದಾಗ ಸಮರ್ಥವಾಗಿ ಎದುರಿಸಬೇಕು. ವೀರೇಂದ್ರ ಹೆಗ್ಗಡೆಯವರು ಸತ್ಯನಾರಾಯಣ ಪೂಜೆಯನ್ನು ಸಮಾಜದ ಉದ್ಧಾರಕ್ಕೆ ಮಾಡಲು ಹೇಳಿದಾಗ ಯಾವುದೇ ಭೇದ ಭಾವವಿಲ್ಲದೆ ಆಚರಿಸಿಕೊಂಡು ಬರುತ್ತಿರುವುದು ಶ್ರೇಷ್ಠ ಸಂಸ್ಕೃತಿ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.
ಗುರುವಾರ ಗೋಪಾಲ ನಾಯ್ಕರ ಗೌರಿ ನಿಲಯದ ವಠಾರದಲ್ಲಿ ಹೆಬ್ರಿ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಚ್ಚಪ್ಪು ಒಕ್ಕೂಟದ 7 ಸಂಘಗಳ ಬೆಳ್ಳಿ ಹಬ್ಬದಲ್ಲಿ ಮಾತನಾಡಿದರು.
ವಾಗ್ಮಿ ದಾಮೋದರ ಶರ್ಮ ಮಾತನಾಡಿ, ‘ನೊಂದ ವ್ಯಕ್ತಿಗೆ ಸಹಾಯ ಮಾಡುವ ಕೆಲಸ ಯೋಜನೆಯಿಂದ ಆಗಿದೆ. 11 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿಗೆ ಅನುದಾನ ನೀಡಿ, ದೇವಸ್ಥಾನ ಜೀರ್ಣೋದ್ಧಾರ, ಕೆರೆಗಳ ಹೂಳೆತ್ತುವಿಕೆ, ಮಧ್ಯವರ್ಜನ ಶಿಬಿರದ ಮೂಲಕ ಸಮಾಜ ಕಟ್ಟುವ ಕೆಲಸ ಆಗಿದೆ. ವೀರೇಂದ್ರ ಹೆಗ್ಗಡೆಯವರು ಸತ್ಯ ಧರ್ಮದ ಹಾದಿಯಲ್ಲಿ ನಡೆದು ಸಮಾಜದಲ್ಲಿ ಅನೇಕರ ಬಾಳಿಗೆ ಬೆಳಕಾಗಿದ್ದಾರೆ’ ಎಂದರು.
ಸದಸ್ಯರಾದ ರಾಜು ಹಾಂಡ, ಶೀನ ನಾಯ್ಕ್, ಗೋಪಾಲ ನಾಯ್ಕ್, ಕ್ರಿಯಾಶೀಲ ಸೇವಾ ಪ್ರತಿನಿಧಿ ಕಾಂತಿ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ಯೋಜನೆಯ ಪ್ರಮುಖರಾದ ಶಾಲಿನಿ ಭಂಡಾರಿ, ಪ್ರವೀಣ್ ಹೆಗ್ಡೆ, ನರೇಂದ್ರ ನಾಯಕ್, ಯೋಜನೆಯ ಸದಸ್ಯರು ಭಾಗವಹಿಸಿದ್ದರು.
ಮೇಲ್ವಿಚಾರಕ ಉದಯ ಕುಲಾಲ್ ನಿರೂಪಿಸಿದರು. ವಿಜಯ ಶೆಟ್ಟಿ ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.