ADVERTISEMENT

ಬೈಂದೂರು | ಪ್ರಾಕೃತಿಕ ವಿಕೋಪ: ಅಣುಕು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:25 IST
Last Updated 10 ಸೆಪ್ಟೆಂಬರ್ 2025, 7:25 IST
ಮರವಂತೆಯ ಶ್ರೀವರಾಹ ಸ್ವಾಮಿ ದೇವಸ್ಥಾನದ ಸಮೀಪ ಪ್ರಾಕೃತಿಕ ವಿಕೋಪ, ನೆರೆ ಪ್ರವಾಹ ಅವಘಡದ ಮುಂಜಾಗ್ರತಾ ಕ್ರಮಗಳ ಅಣುಕು ಪ್ರದರ್ಶನ ನಡೆಯಿತು
ಮರವಂತೆಯ ಶ್ರೀವರಾಹ ಸ್ವಾಮಿ ದೇವಸ್ಥಾನದ ಸಮೀಪ ಪ್ರಾಕೃತಿಕ ವಿಕೋಪ, ನೆರೆ ಪ್ರವಾಹ ಅವಘಡದ ಮುಂಜಾಗ್ರತಾ ಕ್ರಮಗಳ ಅಣುಕು ಪ್ರದರ್ಶನ ನಡೆಯಿತು   

ಬೈಂದೂರು: ಜಿಲ್ಲಾಡಳಿತ, ಬೈಂದೂರು ತಾಲ್ಲೂಕು ಆಡಳಿತ, ಅಗ್ನಿಶಾಮಕ ದಳ ಹಾಗೂ ಮರವಂತೆ, ನಾವುಂದ, ಕಿರಿಮಂಜೇಶ್ವರ ನಾಡ ಗ್ರಾ.ಪಂ. ವತಿಯಿಂದ ಎನ್‌.ಡಿ.ಆರ್‌.ಎಫ್ 10ನೇ ಬೆಟಾಲಿಯನ್ ಸಹಭಾಗಿತ್ವದಲ್ಲಿ ‘ಪ್ರಾಕೃತಿಕ ವಿಕೋಪ ಮತ್ತು ನೆರೆ ಪ್ರವಾಹ ಎದುರಿಸುವುದು, ದೋಣಿ ಅವಘಡದಂತಹ ಘಟನೆಗಳು ನಡೆದಾಗ ಜನರು ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಅಣುಕು ಪ್ರದರ್ಶನ’ ಸೋಮವಾರ ಮರವಂತೆಯ ಶ್ರೀವರಾಹ ಸ್ವಾಮಿ ದೇವಸ್ಥಾನದ ಸಮೀಪ ನಡೆಯಿತು.

ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಮಾತನಾಡಿ, ‘ಪ್ರಾಕೃತಿಕ ವಿಕೋಪದ ವೇಳೆ ಅಜಾಗರೂಕತೆಯಿಂದ ಕಾರ್ಯನಿರ್ವಹಿಸಿದರೆ ನಮ್ಮ ಪ್ರಾಣಕ್ಕೆ ಅಪಾಯ. ಆತಂಕದ ಪರಿಸ್ಥಿತಿ ಎದುರಾದಾಗ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಾಗ, ಜೀವ ಉಳಿಸಲು ಸಾಧ್ಯ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ನಡೆಯಬೇಕು’ ಎಂದರು.

ತಹಶೀಲ್ದಾರ್ ಎಚ್. ರಾಮಚಂದ್ರಪ್ಪ, ನಿರೀಕ್ಷಕ ರವಿಶಂಕರ್, ಎನ್‌ಡಿಆರ್‌ಎಫ್ ನಿರೀಕ್ಷಕ ಪ್ರದೀಪ ಕುಮಾರ್, ಜಿಲ್ಲಾ ಅಗ್ನಿಶಾಮಕ ದಳದ ವಿನಾಯಕ ಎಚ್., ಜಂಟಿ ನಿರ್ದೇಶಕ ವಿವೇಕ ಆರ್., ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ರವಿ ಒ., ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್‌, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕ ವಸಂತ ಆಚಾರ್, ಉಪನಿರೀಕ್ಷಕಿ ಮುಕ್ತಾ ಬಾಯಿ, ಮರವಂತೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಪಟಗಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಗೀತಾ, ರಾಜೇಶ್, ಹರೀಶ್, ಗಣೇಶ್, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಣೇಶ ಭಟ್, ಡಾ. ಶೋಭಾ ಭಾಗವಹಿಸಿದ್ದರು.

ADVERTISEMENT

ಸ್ಥಳೀಯ ಸಾರ್ವಜನಿಕರು, ನಾವುಂದ ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ಎನ್.ಡಿ.ಆರ್.ಎಫ್ ಸಿಬ್ಬಂದಿ ಜಿ.ಎಲ್. ಆಕರ್ಷ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಅಣುಕು ಕಾರ್ಯಾಚರಣೆಯ ನೋಟ: ಆರು ಜನರ ತಂಡವೊಂದು ಮೋಜು ಮಸ್ತಿ ಮಾಡುತ್ತಾ ಸೌಪರ್ಣಿಕಾ ನದಿಯಲ್ಲಿ ದೋಣಿಯಲ್ಲಿ ಹೋಗುತ್ತಾರೆ. ನದಿಯ ಮಧ್ಯದಲ್ಲಿ ದೋಣಿಯಲ್ಲಿದ್ದ ಒಬ್ಬ ಕುಡಿತದ ಅಮಲಿನಲ್ಲಿ ನದಿಗೆ ಬೀಳುತ್ತಿದ್ದಂತೆಯೇ ದೋಣಿ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತದೆ.

ಈ ಪೈಕಿ ಇಬ್ಬರು ಈಜಿ ದಡ ಸೇರಿದರೆ, ಇನ್ನುಳಿದರು ರಕ್ಷಣೆಗಾಗಿ ಗೋಗರೆಯುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಎನ್‌.ಡಿ.ಆರ್‌.ಎಫ್ ಪಡೆ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿ ಬೋಟಿನಲ್ಲಿ ತೆರಳಿ, ಮೂವರನ್ನು ರಕ್ಷಿಸುತ್ತದೆ. ಇನ್ನೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗುತ್ತಾರೆ.

ಕೂಡಲೇ ಎನ್‌.ಡಿ.ಆರ್‌.ಎಫ್‌ನ ಮುಳುಗು ತಜ್ಞರು ದೋಣಿ ಮುಳುಗಿದ ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದ್ದ ಮತ್ತೊಬ್ಬರನ್ನು ಮೇಲಕ್ಕೆತ್ತಿ ದಡಕ್ಕೆ ತರುತ್ತಾರೆ. ದಡಕ್ಕೆ ತಂದ ವ್ಯಕ್ತಿಯ ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಕೂಡಲೇ ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಕೃತಕ ಉಸಿರಾಟದ ಮೂಲಕ ಉಪಚರಿಸುತ್ತಾರೆ. ಸ್ವಲ್ಪ ಚೇತರಿಕೆ ಕಂಡು ಬಂದ ಕೂಡಲೇ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸುತ್ತಾರೆ.

ಅಲ್ಲದೆ ನೆರೆ ಬಂದಾಗ ಮನೆಯಲ್ಲಿಯೇ ಇರುವಂತಹ ಮರದ ದಿಮ್ಮಿ, ವಾಹನಗಳ ಟ್ಯೂಬ್‌ಗಳನ್ನು ಬಳಸಿಕೊಂಡು ಹೇಗೆ ಜೀವ ಉಳಿಸಿಕೊಳ್ಳಬಹುದು ಅನ್ನುವುದರ ಬಗ್ಗೆಯೂ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿ ಕೊಡಲಾಯಿತು.

ಮರವಂತೆಯ ಶ್ರೀವರಾಹ ಸ್ವಾಮಿ ದೇವಸ್ಥಾನದ ಸಮೀಪ ಪ್ರಾಕೃತಿಕ ವಿಕೋಪ ನೆರೆ ಪ್ರವಾಹ ಅವಘಡದ ಮುಂಜಾಗ್ರತಾ ಕ್ರಮಗಳ ಅಣುಕು ಪ್ರದರ್ಶನ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.