ADVERTISEMENT

ವೈದ್ಯರ ಮುಷ್ಕರಕ್ಕೆ ಭಾಗಶಃ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 9:55 IST
Last Updated 9 ನವೆಂಬರ್ 2019, 9:55 IST
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.   

ಉಡುಪಿ: ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಸೇವಾನಿರತ ಮಹಿಳಾ ವೈದ್ಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರು ವೈದ್ಯ ವಿದ್ಯಾಲಯದ ಕಿರಿಯ ವೈದ್ಯರು ಕರೆ ನೀಡಿದ್ದ ಮುಷ್ಕರಕ್ಕೆ ನಗರದಲ್ಲಿ ಭಾಗಶಃ ಬೆಂಬಲ ದೊರೆಯಿತು.

ಮಣಿಪಾಲದ ಪ್ರಸಿದ್ಧ ಕೆಎಂಸಿ ಆಸ್ಪತ್ರೆ ಎಂದಿನಂತೆ ಕಾರ್ಯ ನಿರ್ವಹಿಸಿತು. ಹೊರರೋಗಿ ಹಾಗೂ ಒಳರೋಗಿ ವಿಭಾಗಗಳು ತೆರೆದಿದ್ದವು. ಹಾಗಾಗಿ, ಹೊರ ಜಿಲ್ಲೆಗಳಿಂದ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳಿಗೆ ಹೆಚ್ಚಿನ ಸಮಸ್ಯೆಯಾಗಲಿಲ್ಲ. ನಗರದ ಬಾಳಿಗಾ, ಹೈಟೆಕ್, ಲಲಿತ್‌ ಗಾಂಧೀ ಆಸ್ಪತ್ರೆಗಳಲ್ಲಿ ಸಂಜೆ 6ರವರೆಗೂ ಒಪಿಡಿ ಬಂದ್ ಇತ್ತು. ನಂತರ ಕಾರ್ಯ ನಿರ್ವಹಿಸಿದವು.

ಈ ಮಧ್ಯೆ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್ ಜಿಲ್ಲಾ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ADVERTISEMENT

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡದ ಕಾರಣಕ್ಕೆ ಮಿಂಟೊ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆಗೆ ಮುಂದಾಗಿದ್ದು ಖಂಡನೀಯ. ವೈದ್ಯರ ಮೇಲೆ ಈಚೆಗೆ ಹಲ್ಲೆಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಭಾಗದ ವೈದ್ಯರು ಜೀವಭಯದಿಂದ ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ ಎಂದು ಸಂಘದ ಪದಾಧಿಕಾರಿಗಳು ನೋವು ತೋಡಿಕೊಂಡರು.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನ.6 ಹಾಗೂ 7ರಂದು ಕರಾವಳಿ ಶಾಖೆಯ ಎಲ್ಲ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಹೊರರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದರು.

ಐಎಂಎ ಅಧ್ಯಕ್ಷ ಡಾ.ಉಮೇಶ್ ಪ್ರಭು, ಡಾ.ಪಿ.ವಿ.ಭಂಡಾರಿ, ಗುರುಮೂರ್ತಿ ಭಟ್‌, ಸುದರ್ಶನ್ ರಾವ್‌, ವಿನಾಯಕ್ ಶೆಣೈ, ವಿರೂಪಾಕ್ಷ, ದೀಪಕ್ ಮಲ್ಯ, ಸಂದೀಪ್‌ ಶೆಣೈ, ಅಶೋಕ್ ಕುಮಾರ್ ಓಕುಡೆ, ಡಾ.ನರೇಂದ್ರ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.