ADVERTISEMENT

ಬಿಜೆಪಿಗೆ ಅಧಿಕಾರ ದುರುಪಯೋಗದ ಗೆಲುವು: ಜಿ.ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 12:49 IST
Last Updated 7 ಸೆಪ್ಟೆಂಬರ್ 2021, 12:49 IST
ಜಿ.ಪರಮೇಶ್ವರ್
ಜಿ.ಪರಮೇಶ್ವರ್   

ಉಡುಪಿ: ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ನಾಯಕ ಜಿ.ಪರಮೇಶ್ವರ್ ಹೇಳಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪರಮೇಶ್ವರ್ ಪೆಟ್ರೋಲ್, ಡೀಸೆಲ್‌, ಸಿಲಿಂಡರ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು ಅಧಿಕಾರ ದುರುಪಯೋಗದಿಂದ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಪಕ್ಷವನ್ನು ನಿರಾಶೆಗೊಳಿಸಿಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಮುಂಬರುವ ಅಧಿವೇಶನದ ಹಿನ್ನೆಲೆಯಲ್ಲಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸಭೆ ಕರೆದಿದ್ದು, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುವುದು. ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲಾಗುವುದು ಎಂದರು.

ಜಾತಿ ಜನಗಣತಿಗೆ ಸರ್ಕಾರದ ₹ 150 ಕೋಟಿ ಖರ್ಚಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ವರದಿ ಪೂರ್ಣಗೊಳ್ಳದ ಕಾರಣ ಸಲ್ಲಿಕೆಯಾಗಿರಲಿಲ್ಲ. ಈಗ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಶೀಘ್ರ ಸದನದಲ್ಲಿ ಮಂಡಿಸಬೇಕು. ವರದಿಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಬಹುದು ಎಂದು ಜಿ.ಪರಮೇಶ್ವರ್ ಹೇಳಿದರು.

ಕಾಂಗ್ರೆಸ್‌ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಸಿದ್ದರಾಮಯ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಇಬ್ಬರಿಗೂ ಜವಾಬ್ದಾರಿಗಳಿದ್ದು, ಗುಂಪುಗಾರಿಕೆ ಮಾಡಲು ಅವಕಾಶವಿಲ್ಲ. ಗುಂಪುಗಾರಿಕೆ ಕೇವಲ ಮಾಧ್ಯಮಗಳ ಸೃಷ್ಟಿ ಎಂದ ಪರಮೇಶ್ವರ್, ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಅಪ್ರಸ್ತುತ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.