ಕುಂದಾಪುರ: ನಿಂದನೆ ಹಾಗೂ ಪ್ರಶಂಸೆಯನ್ನು ಸಮಾನವಾಗಿ ಸ್ವೀಕರಿಸಿ ಸಹನೆ, ತಾಳ್ಮೆ, ಪರೋಪಕಾರಿ ಚಿಂತನೆಯಿಂದ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂಬುದನ್ನು ಬಸ್ರೂರು ಅಪ್ಪಣ್ಣ ಹೆಗ್ಡೆ ತಮ್ಮ ನಡೆ– ನುಡಿಗಳಿಂದ ನಿರೂಪಿಸಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಬಣ್ಣಿಸಿದರು.
ಇಲ್ಲಿಗೆ ಸಮೀಪದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಂಗಳವಾರ ಬಿ. ಅಪ್ಪಣ್ಣ ಹೆಗ್ಡೆ ಜನ್ಮದಿನೋತ್ಸವ ಸಮಿತಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ 90ನೇ ಜನ್ಮದಿನ ಆಚರಣೆ, ದತ್ತಿನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಅಜಾತಶತ್ರು ವ್ಯಕ್ತಿತ್ವದ ಅಪ್ಪಣ್ಣ ಹೆಗ್ಡೆ ಅವರು ನಡೆದಾಡುವ ನ್ಯಾಯಾಲಯದಂತೆ ಪಂಚಾಯತಿಕೆಯಿಂದ ನ್ಯಾಯದ ಸಮತೋಲನವನ್ನು ಕಾಪಾಡಿಕೊಂಡವರು. ಅವರಿಲ್ಲದೆ ಯಾವ ಕಾರ್ಯಕ್ರಮವೂ ನಡೆುವುದಿಲ್ಲ. ಅಧಿಕಾರಯುತವಾದ ಮಾತುಗಳೊಂದಿಗೆ ಆತ್ಮವಿಶ್ವಾಸದ ಪ್ರತೀಕ ಎಂದರು.
‘ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಬಿ.ಎ. ವಿವೇಕ್ ರೈ, ಸಾಧಕರು ಕುಳಿತಿರುವ ವೇದಿಕೆಯಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಧನ್ಯತೆ ತಂದಿದೆ ಎಂದರು.
ಮನೋಭಿಮತ ಅರ್ಪಿಸಿದ ಅಪ್ಪಣ್ಣ ಹೆಗ್ಡೆ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಎಂ. ಮೋಹನ್ ಆಳ್ವ ಅವರು, ಅಪ್ಪಣ್ಣ ಹೆಗ್ಡೆ ಅವರ ಜೀವನ ಮೌಲ್ಯವನ್ನು ಕಿರಿಯರಾದ ನಾವೆಲ್ಲರೂ ಅನುಸರಿಸಬೇಕು. ಕುಟುಂಬಕ್ಕೆ ಸೀಮಿತವಾಗದೆ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಅವರು ಸಮಾಜದ ಸಂಪತ್ತು ಎಂದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ, ಭಗವಂತನ ಅನುಗ್ರಹ, ಗುರುಹಿರಿಯರ ಆಶೀರ್ವಾದ ಇದ್ದರೆ ಮನುಷ್ಯ ವ್ಯವಸ್ಥಿತವಾಗಿ ಬಾಳಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜಕ್ಕೆ ನನ್ನ ಸಣ್ಣ ಸೇವೆ ಸಲ್ಲಿಸಿದ್ದೇನೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡುವ ಹೊಣೆ ಎಲ್ಲರದ್ದು. ಮಕ್ಕಳನ್ನು ಶಿಕ್ಷಣ ಸಂಪನ್ನರನ್ನಾಗಿಸಬೇಕು. ನೈತಿಕ, ಮೌಲ್ಯಾಧಾರಿತ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರದ್ದು ಎಂದರು.
ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಶಾಸಕರಾದ ಡಿ.ಟಿ. ರಾಜೇಗೌಡ, ಎಂ. ಕಿರಣ್‌ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ವಿಧಾನಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಅಭಿನಂದಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ, ಬೈಂದೂರು ಅಭಿಮಾನಿಗಳು, ಕುಂಭಾಶಿ ಆನೆಗುಡ್ಡೆ ದೇವಸ್ಥಾನ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ, ಹಟ್ಟಿಯಂಗಡಿ ವಿನಾಯಕ ದೇವಸ್ಥಾನ, ಅಪ್ಪಣ್ಣ ಹೆಗ್ಡೆ ಅಭಿಮಾನಿಗಳು ಮುಂಬೈ, ಬಂಟ ಯಾನೆ ನಾಡವರ ಸಂಘ ಸೇರಿದಂತೆ ವಿವಿಧ ಸಂಘ– ಸಂಸ್ಥೆಗಳಿಂದ ಸನ್ಮಾನ, ಅಭಿನಂದನೆ ನಡೆಯಿತು. ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅಶಕ್ತರಿಗೆ ಸಹಾಯಧನ ಹಸ್ತಾಂತರಿಸಲಾಯಿತು.
ರಾಮ್‌ರತನ್ ಹೆಗ್ಡೆ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಸುಶಾಂತ್ ರೈ, ನಿರುಪಮಾ ಹೆಗ್ಡೆ, ಪ್ರೀತಮ್ ಎಸ್. ರೈ, ಆನಂದ ಸಿ. ಕುಂದರ್, ಭೋಜರಾಜ್ ಶೆಟ್ಟಿ ಬೈಂದೂರು, ಟಿ.ಬಿ.ಶೆಟ್ಟಿ ಕುಂದಾಪುರ ಇದ್ದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಸ್ವಾಗತಿಸಿದರು. ಆಡಳಿತ ಟ್ರಸ್ಟಿ ರಾಮ್‌ಕಿಶನ್ ಹೆಗ್ಡೆ ಟ್ರಸ್ಟ್ ವರದಿ ಮಂಡಿಸಿದರು. ಉದಯ್ ಶೆಟ್ಟಿ ಪಡುಕರೆ ಅಭಿನಂದನಾ ಪತ್ರ ವಾಚಿಸಿದರು. ರಾಜೇಶ್ ಕೆ.ಸಿ. ನಿರೂಪಿಸಿದರು. ಕಲಾಕ್ಷೇತ್ರ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ವಂದಿಸಿದರು. ದಿನಕರ್ ಆರ್. ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು.
ಮಂಗಳೂರಿನ ಜರ್ನಿ ಥಿಯೇಟರ್ ತಂಡದಿಂದ ‘ಬೇಲಿ ಮುಳ್ಳಿನ ನೀಲಿ ಹೂವುಗಳು’, ಗುರುಕುಲ ವಿದ್ಯಾರ್ಥಿಗಳಿಂದ ‘ನೃತ್ಯ ಸಂಗಮ’, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ ‘ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯಗಾಥೆ’ ಪ್ರದರ್ಶನ ನಡೆಯಿತು.
90 ದೀಪದಿಂದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ಆರತಿ 10 ಸಾವಿರಕ್ಕೂ ಮಿಕ್ಕಿದ ಜನಸ್ತೋಮ, ಭೋಜನ ವ್ಯವಸ್ಥೆ ಪಾರಂಪರಿಕ ಮೆರವಣಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.