ADVERTISEMENT

ಉಡುಪಿ: ಬೇಕಿದೆ ಸಮರ್ಪಕ ಚರಂಡಿ ವ್ಯವಸ್ಥೆ

ಹಲವೆಡೆ ಇಲ್ಲ ಒಳಚರಂಡಿ ವ್ಯವಸ್ಥೆ: ಕಲುಷಿತಗೊಳ್ಳುತ್ತಿದೆ ಬಾವಿ ನೀರು

ನವೀನ್‌ಕುಮಾರ್‌ ಜಿ.
Published 17 ಫೆಬ್ರುವರಿ 2025, 6:10 IST
Last Updated 17 ಫೆಬ್ರುವರಿ 2025, 6:10 IST
<div class="paragraphs"><p>ಹಲವೆಡೆ ಇಲ್ಲ ಒಳಚರಂಡಿ ವ್ಯವಸ್ಥೆ: ಕಲುಷಿತಗೊಳ್ಳುತ್ತಿದೆ ಬಾವಿ ನೀರು</p></div>

ಹಲವೆಡೆ ಇಲ್ಲ ಒಳಚರಂಡಿ ವ್ಯವಸ್ಥೆ: ಕಲುಷಿತಗೊಳ್ಳುತ್ತಿದೆ ಬಾವಿ ನೀರು

   

ಉಡುಪಿ: ನಗರವು ಅಭಿವೃದ್ಧಿ ಹೊಂದುತ್ತಿದ್ದರೂ ಹಲವೆಡೆ ಚರಂಡಿ, ಒಳಚಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಜನರಿಗೆ ಸದಾ ಒಂದಲ್ಲ ಒಂದು ಸಮಸ್ಯೆ ತಂದೊಡ್ಡುತ್ತಿದೆ.

ಇದು ಹಲವು ವರ್ಷಗಳ ಸಮಸ್ಯೆಯಾದರೂ ಇನ್ನೂ ಪರಿಹಾರ ಒದಗಿ ಬಂದಿಲ್ಲ. ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಶಿಫಾರಸು ಕಳಿಸಿ ಎಂದು ಸರ್ಕಾರ ಸೂಚಿಸಿರುವ ಈ ಸಂದರ್ಭದಲ್ಲೂ ಚರಂಡಿ, ಒಳಚರಂಡಿ ಸಮಸ್ಯೆಗಳೇ ಮುಖ್ಯವಾಗಿ ಚರ್ಚೆಯಾಗುತ್ತಿವೆ.

ADVERTISEMENT

ನಗರಕ್ಕೆ ಮೊದಲು ಒಳಚರಂಡಿ ಮತ್ತು ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಅನಂತರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಿ ಎಂಬ ಅಭಿಪ್ರಾಯಗಳೂ ಕೆಲವರಿಂದ ಕೇಳಿ ಬಂದಿವೆ.

ಸಮರ್ಪಕವಾಗಿಲ್ಲದ ಚರಂಡಿಗಳಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಬಾವಿಗಳೂ ಕಲುಷಿತವಾಗಿ ಜನರಲ್ಲಿ ರೋಗ ಭೀತಿ ಕಾಡುತ್ತಿದೆ ಎಂಬ ದೂರುಗಳು ಹಲವು ವರ್ಷದಿಂದಲೂ ಕೇಳಿ ಬರುತ್ತಿವೆ. ನಗರ ಮಾತ್ರವಲ್ಲದೆ ಕೆಲವು ತಾಲ್ಲೂಕು ಕೇಂದ್ರಗಳಲ್ಲೂ ಚರಂಡಿ ಸಮಸ್ಯೆಗಳಿಗೆ ಇನ್ನೂ ಮುಕ್ತಿ ದೊರಕಿಲ್ಲ.

ಉಡುಪಿ ನಗರದ ಸರ್ವಿಸ್‌ ರಸ್ತೆಗಳೂ ಸೇರಿದಂತೆ ಹಲವು ರಸ್ತೆಗಳ ಬದಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ಹೋಗಿ ರಸ್ತೆ ಹದಗೆಟ್ಟರೆ, ಬೇಸಿಗೆ ಕಾಲದಲ್ಲೆ ಕೆಲವೆಡೆ ಚರಂಡಿಗಳು ಕಟ್ಟಿನಿಂತು ಗಬ್ಬು ನಾರುತ್ತವೆ.

ಮಣಿಪಾಲ ಮೊದಲಾದೆಡೆ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚರಂಡಿಯ ಕಲುಷಿತ ನೀರು ರಸ್ತೆಯಲ್ಲೇ ಹರಿದು ಜನರಿಗೆ ತೊಂದರೆ ಉಂಟಾಗುತ್ತಿದೆ. ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡದವರು ರಾತ್ರಿ ವೇಳೆ ಕೊಳಚೆ ನೀರನ್ನು ನೇರವಾಗಿ ಚರಂಡಿಗೆ ಹಾಯಿಸುತ್ತಾರೆಂಬ ಆರೋಪಗಳೂ ಜನರಿಂದ ಕೇಳಿ ಬರುತ್ತಿವೆ. ಚರಂಡಿಗೆ ನೇರವಾಗಿ ಕೊಳಚೆ ನೀರು ಹಾಯಿಸುವವರಿಗೆ ನಗರ ಸಭೆಯವರು ಹಲವು ಬಾರಿ ಎಚ್ಚರಿಕೆ ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ದೂರುತ್ತಾರೆ ನಗರ ವಾಸಿಗಳು.

ಮಣಿಪಾಲದ ವಿದ್ಯಾರತ್ನ ನಗರದ 8ನೇ ಕ್ರಾಸ್ ಬಳಿ ಚರಂಡಿ ಉಕ್ಕಿ ಹರಿದು ಕೊಳಚೆ ನೀರು ರಸ್ತೆಯಲ್ಲಿ ಸಂಗ್ರಹಗೊಳ್ಳುತ್ತಿದೆ. ಇದರಿಂದ ಆ ಪ್ರದೇಶದ ಜನರಿಗೆ ನಿರಂತರ ತೊಂದರೆಯಾಗುತ್ತದೆ. ಇದೇ ರೀತಿ ನಗರದ ವಿವಿಧೆಡೆ ಚರಂಡಿಯ ಕೊಳಚೆ ನೀರು ರಸ್ತೆಯಲ್ಲಿ ಹರಿದು ಸಮಸ್ಯೆ ಉಂಟಾಗುತ್ತಿದೆ.

ನಗರಕ್ಕೆ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಬೇಕೆನ್ನುವುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದೆ. ಅದಕ್ಕಾಗಿ ಹಲವು ಪ್ರಯತ್ನಗಳು ನಡೆದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ಸಮುದ್ರಕ್ಕೆ ಹಾಯಿಸುವ ಯೋಜನೆ ಕುರಿತು ಹಲವು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದ್ದರೂ ಇನ್ನೂ ಸಾಕಾರವಾಗಿಲ್ಲ.

ನಗರದ ಇಂದ್ರಾಣಿ ನದಿಗೂ ಹೋಟೆಲ್‌ ಮೊದಲಾದವುಗಳ ತ್ಯಾಜ್ಯ ನೀರು ಹರಿದು ಕುಲುಷಿತಗೊಳ್ಳುತ್ತಿದ್ದು ಸಂಬಂಧಪಟ್ಟವರು ಕಡಿವಾಣ ಹಾಕಬೇಕು ಎಂದು ಸ್ಥಳೀಯ ನಿವಾಸಿಗಳು

ಮಳೆಗಾಲ ಆರಂಭವಾಗುವಾಗ ಚರಂಡಿಯ ಹೂಳು ತೆಗೆದು ಪಕ್ಕದಲ್ಲೇ ಹಾಕಲಾಗುತ್ತದೆ. ಅದು ಮಳೆ ನೀರಿಗೆ ಮತ್ತೆ ಚರಂಡಿ ಸೇರುತ್ತದೆ. ಆದ್ದರಿಂದ ಬೇಸಿಗೆಯಲ್ಲೇ ಚರಂಡಿಗಳ ಹೂಳು, ಕಸವನ್ನು ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ಜನರು.

ಮಣಿಪಾಲದ ವಿದ್ಯಾರತ್ನ ನಗರದ 8ನೇ ಕ್ರಾಸ್ ಬಳಿ ಚರಂಡಿ ಉಕ್ಕಿಹರಿದು ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ
ಉಡುಪಿ ನಗರದ ಶಾರದ ಮಂಟಪ ಬಳಿಯ ತೋಡಿನ ನೀರು ಕಲುಷಿತವಾಗಿರುವುದು
ಉಡುಪಿ ನಗರದ ಮಠದಬೆಟ್ಟು ಪರಿಸರದಲ್ಲಿ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡಿರುವುದು
ಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶದ ಚರಂಡಿಯ ದುರವಸ್ಥೆ
ಜನರು ಚರಂಡಿಗ ಕಸ ಇತರ ವಸ್ತುಗಳನ್ನು ಎಸೆಯುವುದರಿಂದ ಅದು ಒಳ ಚರಂಡಿಯಲ್ಲಿ ಸಂಗ್ರಹಗೊಂಡು ಕೊಳಚೆ ನೀರು ಉಕ್ಕಿ ಹರಿಯುತ್ತದೆ. ಆಗಾಗ ಒಳಚರಂಡಿಯಿಂದ ಕಸ ತೆರವುಗೊಳಿಸಲಾಗುತ್ತದೆ
ಉದಯ್‌ ಕುಮಾರ್‌ ಶೆಟ್ಟಿ ನಗರಸಭೆಯ ಹೆಚ್ಚುವರಿ ಪ್ರಭಾರ ಪೌರಾಯುಕ್ತ
ನಗರಸಭೆಯವರು ಚರಂಡಿ ಸ್ವಚ್ಛತೆಗೆ ಮಳೆಗಾಲ ಬರಲಿ ಎಂದು ಕಾಯಬಾರದು . ಈಗಲೇ ಚರಂಡಿಯ ಹೂಳು ತೆಗೆದು ಅದನ್ನು ಬೇರೆಡೆಗೆ ಸಾಗಿಸಬೇಕು. ನಗರದಲ್ಲಿ ಒಳಚಂಡಿ ಇರುವ ಪ್ರದೇಶದ ಬಹುತೇಕ ಬಾವಿಗಳ ನೀರು ಕಲುಷಿತವಾಗಿದೆ
ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ
ಮಣಿಪಾಲದ ವಿದ್ಯಾರತ್ನ ನಗರದ 8ನೇ ಕ್ರಾಸ್ ಬಳಿ ಚರಂಡಿ ಉಕ್ಕಿ ಹರಿದು ಕೊಳಚೆ ನೀರು ರಸ್ತೆಯಲ್ಲೆ ಹರಿಯುವ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಜಿಲ್ಲಾಧಿಕಾರಿ ಇತರ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ
ದಿನೇಶ್‌ ಶೆಣೈ ವಿದ್ಯಾರತ್ನ ನಗರ ನಿವಾಸಿ

‘ಮೂಲಸೌಕರ್ಯ ಕಡಿತಗೊಳಿಸುತ್ತೇವೆ’

ಚರಂಡಿಗೆ ನೇರವಾಗಿ ಕೊಳಚೆ ನೀರು ಬಿಡುವ ಅಪಾರ್ಟ್‌ಮೆಂಟ್‌ ವಾಣಿಜ್ಯ ಕಟ್ಟಡದವರಿಗೆ ಎರಡು ಬಾರಿ ನೋಟಿಸ್‌ ಕೊಟ್ಟಿದ್ದೇವೆ. ಆದರೂ ಇನ್ನೂ ಕೆಲವರು ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ. ಅಂತಹವರಿಗೆ ಮೂರನೇ ನೋಟಿಸ್‌ ಕೊಟ್ಟು ಆ ಕಟ್ಟಡಗಳ ಮೂಲಸೌಕರ್ಯ  ಕಡಿತಗೊಳಿಸಲಾಗುವುದು. ಪುತ್ತೂರು ಶಿವಳ್ಳಿ ಮಲ್ಪೆ ಭಾಗದಲ್ಲಿ ಯುಜಿಡಿ ನಿರ್ಮಾಣಕ್ಕಾಗಿ ಡಿಪಿಆರ್‌ ಸಿದ್ಧಪಡಿಸಿ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಅದಕ್ಕೆ ಇನ್ನೂ ಅಂಗೀಕಾರ ಲಭಿಸಿಲ್ಲ. ಕೊಳಚೆ ನೀರನ್ನು ಶುದ್ಧೀಕರಿಸಿ ಸಮುದ್ರಕ್ಕೆ ಬಿಡುವ ಯೋಜನೆಗೆ ಸಂಬಂಧಿಸಿ ಡಿಪಿಆರ್ ಸಿದ್ಧಪಡಿಸಲು ಎಂಜಿನಿಯರ್‌ಗಳಿಗೆ ಸೂಚಿಸಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.

ಕಾಪುವಿನಲ್ಲೂ ಸಮಸ್ಯೆ

ಕಾಪು ಪುರಸಭೆ ವ್ಯಾಪ್ತಿಯ ಪಟ್ಟಣದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗಿದೆ. ಪಡುಬಿದ್ರಿಯಲ್ಲೂ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿಯುವ ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗೆ ಹೋಟೇಲ್‌ಗಳ ಕೊಳಚೆ ನೀರನ್ನು ಬಿಡಲಾಗುತ್ತದೆ ಎಂದು ಜನರು ಆರೋಪಿಸಿದ್ದಾರೆ.

ತೆರೆದ ಚರಂಡಿಯಿಂದ ಅಪಾಯ

ಬೈಂದೂರು ಪೇಟೆಯ ಕೇಂದ್ರ ಭಾಗದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿನ ಚರಂಡಿಗಳಿಗೆ ಮಾತ್ರ ಮುಚ್ಚಿಗೆ ಹಾಕಿದ್ದು ಉಳಿದ ಬಹುತೇಕ ಕಡೆ ಚರಂಡಿಗಳಿಗೆ ಮುಚ್ಚಿಗೆ ಹಾಕಿಲ್ಲ. ಹೆಚ್ಚಿನ ಭಾಗಗಳಲ್ಲಿ ರಸ್ತೆಗಳು ಕಾಂಕ್ರಿಟೀಕರಣಗೊಂಡಿದ್ದು ಪಾದಾಚಾರಿಗಳು ದ್ವಿಚಕ್ರ ವಾಹನ ಸವಾರರು ಹಾಗೂ ವಾಹನಗಳು ಸ್ವಲ್ಪ ಆಯ ತಪ್ಪಿದರೂ ತೆರೆದ ಚರಂಡಿಗೆ ಬೀಳುವ ಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಬದಿಯ ಚರಂಡಿಗಳಿಗೆ ಹೋಟೆಲ್‌ಗಳ ವಾಣಿಜ್ಯ ಮಳಿಗೆಗಳ ತ್ಯಾಜ್ಯ ನೀರಿನ ಅಕ್ರಮ ಸಂಪರ್ಕವಿದ್ದು ಅಲ್ಲಲ್ಲಿ ದುರ್ವಾಸನೆ ಬೀರುತ್ತಿದೆ. ಕಸವನ್ನು  ಚರಂಡಿಗೆ ಹಾಕುವುದರಿಂದ ಮಳೆಗಾಲದಲ್ಲಿ ನೀರಿನ ಹರಿವಿಗೂ ತಡೆ ಉಂಟಾಗುತ್ತಿದೆ.

ಪೂರಕ ಮಾಹಿತಿ: ಹಮೀದ್‌ ಪಡುಬಿದ್ರಿ, ವಿಶ್ವನಾಥ ಆಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.