ADVERTISEMENT

ಮೀನುಗಾರರಿಗೆ ಮೊಗೇರ ಜಾತಿ ಪ್ರಮಾಣಪತ್ರ: ವಿರೋಧ

ಜೂನ್ 6ರಂದು ಉಡುಪಿಯಲ್ಲಿ ಪ್ರತಿಭಟನೆ: ದಸಂಸ ಮುಖಂಡ ಸುಂದರ್ ಮಾಸ್ತರ್

​ಪ್ರಜಾವಾಣಿ ವಾರ್ತೆ
Published 28 ಮೇ 2022, 15:31 IST
Last Updated 28 ಮೇ 2022, 15:31 IST

ಉಡುಪಿ: ಮೀನುಗಾರ ಸಮುದಾಯದವರಿಗೆ ಪರಿಶಿಷ್ಟ ಜಾತಿಯ ಮೊಗೇರ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಮೊಗೇರ ಸಂಘದ ಜಂಟಿ ಆಶ್ರಯದಲ್ಲಿ ಜೂನ್ 6ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀನುಗಾರರಿಗೆ ಮೊಗೇರ ಜಾತಿಯ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅಸ್ಪೃಶ್ಯ ಜಾತಿಯಲ್ಲದ ಮೀನುಗಾರರು ಹಾಗೂ ಭೋವಿ ಜನಾಂಗದವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಅಸ್ಪಶ್ಯರಲ್ಲದ ಜನಾಂಗಕ್ಕೆ ಪರಿಶಿಷ್ಟ ಜಾತಿಯ ಮೀಸಲಾತಿ ನೀಡಿದಲ್ಲಿ ಅಸ್ಪೃಶ್ಯ ವರ್ಗಕ್ಕೆ ತೀವ್ರ ಅನ್ಯಾಯವಾಗಲಿದೆ. ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಲಭ್ಯಗಳನ್ನು ಪಡೆದಿದ್ದರೆ ಕೂಡಲೇ ಹಿಂಪಡೆದು ಕಾನೂನುಕ್ರಮ ಕೈಗೊಳ್ಳಬೇಕು. ಅಸ್ಪೃಶ್ಯರಲ್ಲದ ಮೀನುಗಾರ ಸಮುದಾಯಕ್ಕೆ ನೀಡಿರುವ ಪರಿಶಿಷ್ಟ ಜಾತಿಯ ಮೊಗೇರ ಪ್ರಮಾಣಪತ್ರಗಳನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ದಸಂಸಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಅಪ್ಪು ಮರ್ಣೆ, ಗುರುಚರಣ್ ಪೊಲಿಪು, ಅಣ್ಣಪ್ಪ ನಕ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.