
ಉಡುಪಿ: ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸರಿಯಾಗಿದ್ದರೆ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಅಭಿಪ್ರಾಯಪಟ್ಟರು.
ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಜ್ಯ ಮಟ್ಟದ ಶೈಕ್ಷಣಿಕ ಜಾಥಾವನ್ನು ನಗರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಮಂಗಳವಾರ ಸ್ವಾಗತಿಸಿ ಅವರು ಮಾತನಾಡಿದರು.
ಇಂದು ಕೆಲವು ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗುತ್ತದೆ ಎಂಬ ವರದಿಯನ್ನು ನಾವು ಓದುತ್ತಿದ್ದೇವೆ. ಇದು ಹೇಗೆ ಸಾಧ್ಯ? ಸರ್ಕಾರ ಸರಿಯಾಗಿ ಪರಿಶೀಲನೆ ನಡೆಸಿ ಯಾಕೆ ಶೂನ್ಯ ದಾಖಲಾತಿಯಾಗುತ್ತಿದೆ ಎಂಬುದರ ಕಾರಣವನ್ನು ಕಂಡು ಹಿಡಿಯಬೇಕಾಗಿದೆ ಎಂದರು.
ಚಿಂತಕ ಪ್ರೊ. ಫಣಿರಾಜ್ ಮಾತನಾಡಿ, ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಕಳೆದರೂ ಸ್ವಾತಂತ್ರ್ಯ ಸಿಗುವಾಗ ಇದ್ದ ಆಶಯಕ್ಕಾಗಿ ನಾವು ಇಂದೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಸಾರ್ವತ್ರಿಕ ಶಿಕ್ಷಣ ನೀಡುವುದು ಸ್ವಾತಂತ್ರ್ಯದ ಆಶಯವಾಗಿತ್ತು. ಎಲ್ಲಿಯವರೆಗೆ ಸಾರ್ವತ್ರಿಕ ಶಿಕ್ಷಣ ಸಿಗುವುದಿಲ್ಲವೋ ಅಲ್ಲಿಯವರೆಗೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಜಾಥಾ ತಂಡದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯ ಘಟಕ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ವಿಜಯ, ರಾಜ್ಯ ಸಮಿತಿ ಸದಸ್ಯರಾದ ಅರ್ಪಿತ, ಮಣಿಭಾರತಿ, ವನಿತ್ ಇದ್ದರು.
ಎಸ್‌ಎಫ್‌ಐ ಉಡುಪಿ ತಾಲ್ಲೂಕು ಕಾರ್ಯದರ್ಶಿ ಕಾರ್ತಿಕ್, ಡಿವೈಎಫ್ಐ ಮಾಜಿ ಮುಖಂಡ ಸುರೇಶ್ ಕಲ್ಲಾಗಾರ್, ಕಾರ್ಮಿಕ ಮುಖಂಡರಾದ ಉಮೇಶ್ ಕುಂದರ್, ಶಶಿಧರ ಗೊಲ್ಲ, ನಳಿನಿ ಎಸ್., ರಂಗನಾಥ, ಕೃಷ್ಣ, ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷೆ ಸರೋಜಾ ಎಸ್. ಉಪಸ್ಥಿತರಿದ್ದರು.
ಎಸ್‌ಎಫ್‌ಐ ಉಡುಪಿ ಜಿಲ್ಲಾ ಮಾಜಿ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿದರು. ಕೃತಿಕಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.