ADVERTISEMENT

ದುಬಾರಿ ದಂಡ: ಡಿಎಲ್‌ಗೆ ಸವಾರರ ದೌಡು

ಪರವಾನಗಿಗೆ ಮುಗಿಬಿದ್ದ ಸವಾರರು, ಮಾಲಿನ್ಯ ತಪಾಸಣೆ, ವಿಮೆಗೂ ಹೆಚ್ಚಿದ ಬೇಡಿಕೆ

ಬಾಲಚಂದ್ರ ಎಚ್.
Published 9 ಸೆಪ್ಟೆಂಬರ್ 2019, 20:24 IST
Last Updated 9 ಸೆಪ್ಟೆಂಬರ್ 2019, 20:24 IST
ಉಡುಪಿ ಆರ್‌ಟಿಒ ಕಚೇರಿ
ಉಡುಪಿ ಆರ್‌ಟಿಒ ಕಚೇರಿ   

ಉಡುಪಿ: ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡದ ಮೊತ್ತವನ್ನು ಏರಿಸಿದ ಬೆನ್ನಲ್ಲೇ, ವಾಹನ ಸವಾರರು ಚಾಲನಾ ಪರವಾನಗಿ (ಡಿಎಲ್‌) ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ.‌

ಸೆ.1ರಿಂದ 9ರವರೆಗೆಉಡುಪಿಯ ಸಾರಿಗೆ ವಲಯದ ವ್ಯಾಪ್ತಿಯಲ್ಲಿ ಆನ್‌ಲೈನ್‌ ಮೂಲಕ 590 ಮಂದಿ ಕಲಿಕಾ ಪರವಾನಗಿಗೆ (ಎಲ್‌ಎಲ್‌) ಅರ್ಜಿ ಸಲ್ಲಿಸಿದ್ದಾರೆ. ಸೆ.3ರ ನಂತರ ಆನ್‌ಲೈನ್‌ ಅರ್ಜಿಗಳ ಸಲ್ಲಿಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಆರ್‌ಟಿಒ ರಾಮಕೃಷ್ಣ ರೈ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜತೆಗೆ, ಈಗಾಗಲೇ ಎಲ್‌ಎಲ್‌ ಪಡೆದುಕೊಂಡಿರುವ 991 ಮಂದಿ ಚಾಲನಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಕೇವಲ 9 ದಿನಗಳಲ್ಲಿ ₹ 6.75 ಲಕ್ಷ ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.

ADVERTISEMENT

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ವಿಚಾರ ಮಾಧ್ಯಮಗಳಿಂದ ತಿಳಿಯುತ್ತಿದ್ದಂತೆ ಪರವಾನಗಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗುತ್ತಾ ಬಂತು. ಜುಲೈನಲ್ಲಿ 1,572 ಹಾಗೂ ಆಗಸ್ಟ್‌ನಲ್ಲಿ 2,448 ಮಂದಿ ಅರ್ಜಿ ಸಲ್ಲಿಸಿದ್ದರು ಎಂದು ವಿವರ ನೀಡಿದರು.

ಡಿಎಲ್‌ ನವೀಕರಣಕ್ಕಾಗಿ ಅರ್ಜಿ ಹಾಕುವವರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದೆ ಡಿಎಲ್‌ ನವೀಕರಣ ಅವಧಿ ಮುಗಿಯುವ ತಿಂಗಳು ಮುಂಚಿತವಾಗಿ ಮಾತ್ರ ಅರ್ಜಿ ಸಲ್ಲಿಸಬೇಕಿತ್ತು. ಈಗ ಒಂದು ವರ್ಷ ಬಾಕಿ ಇರುವಾಗಲೇ ನವೀಕರಣ ಮಾಡಿಕೊಳ್ಳಬಹುದು ಎಂದರು.

ಮತ್ತೊಂದೆಡೆ, ನಗರದ ಇಂದ್ರಾಳಿ ಮುಖ್ಯರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಇರುವ ಶ್ರೀಕೃಷ್ಣ ಎಮಿಷನ್‌ ಟೆಸ್ಟ್‌ ಕೇಂದ್ರದಲ್ಲಿ ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳಲು ವಾಹನಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ವಾರದ ಹಿಂದೆ ದಿನಕ್ಕೆ 25ರಿಂದ 30 ವಾಹನಗಳು ತಪಾಸಣೆಗೆ ಬರುತ್ತಿದ್ದವು. ಮೂರು ದಿನಗಳಿಂದ ಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಕನಿಷ್ಠ 60 ರಿಂದ 70 ವಾಹನಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದರು.

ಕರಾವಳಿ ಬೈಪಾಸ್‌, ಮಣಿಪಾಲ ಸೇರಿದಂತೆ ಹಲವೆಡೆಗಳಲ್ಲಿ ಇರುವ ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವಿಮೆಗೆ ಹೆಚ್ಚಿದ ಬೇಡಿಕೆ:ಮತ್ತೊಂದೆಡೆ ವಾಹನಗಳ ವಿಮೆ ನವೀಕರಣದ ಪ್ರಮಾಣವೂ ಹೆಚ್ಚಾಗಿದೆ. ವಿಮಾ ಕಂತು ಬಾಕಿ ಇದ್ದವರು ಸಂಬಂಧಪಟ್ಟ ವಿಮಾ ಕಚೇರಿಗೆ ತೆರಳಿ ಪ್ರೀಮಿಯಂ ತುಂಬುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಲವು ವರ್ಷಗಳಿಂದ ವಾಹನ ವಿಮೆ ಕಟ್ಟಿರಲಿಲ್ಲ. ಈಗ ದಂಡದ ಮೊತ್ತ ವಿಮೆಯ ಕಂತಿಗಿಂತ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಪಾವತಿ ಮಾಡಬೇಕಾಗಿದೆ ಎಂದು ಸವಾರರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.