ADVERTISEMENT

ಕೋವಿಡ್ 3ನೇ ಅಲೆ: ಮಕ್ಕಳ ರಕ್ಷಣೆಗೆ ಆದ್ಯತೆ: ಜಿಲ್ಲಾಧಿಕಾರಿ ಜಿ.ಜಗದೀಶ್

ವೈದ್ಯಕೀಯ ತಜ್ಞರ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:28 IST
Last Updated 2 ಜುಲೈ 2021, 14:28 IST

ಉಡುಪಿ: ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್‌ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಈಗಾಗಲೇ ಭಾರತೀಯ ಮಕ್ಕಳ ವೈದ್ಯರ ಸಂಘ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಜಿಲ್ಲೆಯಲ್ಲಿ ಮಾರ್ಗಸೂಚಿ ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮೂರನೇ ಅಲೆಯಿಂದ ಮಕ್ಕಳು ಬಾಧಿತರಾದರೆ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ 40 ಐಸಿಯು ಬೆಡ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 60 ಬೆಡ್‌ಗಳನ್ನು ಚಿಕಿತ್ಸೆಗೆ ಸಜ್ಜುಗೊಳಿಸಬೇಕು ಎಂದು ಸೂಚಿಸಿದರು.

ADVERTISEMENT

ಮಕ್ಕಳಿಗೆ ಕೋವಿಡ್ ಚಿಕಿತ್ಸೆ ನೀಡುವ ಸಂಬಂಧ ಜಿಲ್ಲೆಯ ಸರ್ಕಾರಿ ಮಕ್ಕಳ ವೈದ್ಯರೊಂದಿಗೆ ಎಲ್ಲ ಖಾಸಗಿ ಆಸ್ಪತ್ರೆಗಳ ಮಕ್ಕಳ ತಜ್ಞರು ಅಗತ್ಯ ಸಹಕಾರ ನೀಡಬೇಕು. ಮಕ್ಕಳಿಗೆ ನೀಡಬೇಕಾದ ಚಿಕಿತ್ಸಾ ವಿಧಾನಗಳ ಕುರಿತು ಭಾರತೀಯ ಮಕ್ಕಳ ವೈದ್ಯರ ಸಂಘದ ಚಿಕಿತ್ಸಾ ವಿಧಾನಗಳ ಬಗ್ಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕರಿಗೆ ಹಾಗೂ ಸಿಬ್ಬಂದಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಉಪಕರಣಗಳ ಬಳಕೆ ಕುರಿತು ತಾಂತ್ರಿಕ ತರಬೇತಿ ಸಹ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಪೋಷಕರು ಅನಗತ್ಯವಾಗಿ ಮಕ್ಕಳನ್ನು ಜನಸಂದಣಿ ಇರುವ ಪ್ರದೇಶಗಳಿಗೆ ಕರೆದೊಯ್ಯಬಾರದು. ಮನೆಯಲ್ಲಿಯೇ ತಯಾರಿಸಿದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ನೀಡುವುದರ ಮೂಲಕ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಮಕ್ಕಳ ತಜ್ಞರು ಸಭೆಯಲ್ಲಿ ಸಲಹೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ.ನಾಗಭೂಷಣ ಉಡುಪ, ಕೋವಿಡ್ ನೋಡಲ್‌ ಅಧಿಕಾರಿ ಡಾ.ಪ್ರಶಾಂತ್ ಭಟ್ ಹಾಗೂ ಜಿಲ್ಲೆಯ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು, ಆರೋಗ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.