ADVERTISEMENT

ಮನೆ ಕುಸಿದು ಬೀಳುತ್ತದೆ ಎನ್ನುವ ಭಯ: ಸಹಾಯದ ನೀರೀಕ್ಷೆಯಲ್ಲಿ ಬಡ ಕುಟುಂಬ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 6:22 IST
Last Updated 28 ಜೂನ್ 2025, 6:22 IST
ಕುಂದಾಪುರ ತಾಲ್ಲೂಕಿನ ಆಜ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಿಜೆಡ್ಡು ಎಂಬಲ್ಲಿನ ನಿವಾಸಿ ರಾಜು ಪೂಜಾರಿ ಅವರ ಶಿಥಿಲಾವಸ್ಥೆಯಲ್ಲಿ ಇರುವ ವಾಸ್ತವ್ಯದ ಮನೆ
ಕುಂದಾಪುರ ತಾಲ್ಲೂಕಿನ ಆಜ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಿಜೆಡ್ಡು ಎಂಬಲ್ಲಿನ ನಿವಾಸಿ ರಾಜು ಪೂಜಾರಿ ಅವರ ಶಿಥಿಲಾವಸ್ಥೆಯಲ್ಲಿ ಇರುವ ವಾಸ್ತವ್ಯದ ಮನೆ   

‌ಕುಂದಾಪುರ: ಮಳೆಗಾಲ ಬಂತೆಂದರೆ ಕರಾವಳಿ ಭಾಗದ ಜನರು ಮುಂದಿನ ಮೂರು ತಿಂಗಳು ಹೇಗೆ ಕಳೆಯುವುದು ಎನ್ನುವ ಆತಂಕದಲ್ಲೇ ಇರುತ್ತಾರೆ. ಅದರಲ್ಲಿಯೂ ಶಿಥಿಲಾವಸ್ಥೆಯಲ್ಲಿರುವ ಮನೆ ಗಾಳಿ–ಮಳೆಯ ಯಾವಾಗ ಕುಸಿದು ಬೀಳುತ್ತದೆ ಎನ್ನುವ ಭಯದಲ್ಲಿಯೇ ಕಾಲ ಕಳೆಯಬೇಕು. ಇಂತಹ ಸ್ಥಿತಿ ತಾಲ್ಲೂಕಿನ ಆಜ್ರಿ ಗ್ರಾ.ಪಂ. ವ್ಯಾಪ್ತಿಯ ಗೋರಿಜೆಡ್ಡು ಎಂಬಲ್ಲಿನ ನಿವಾಸಿ ರಾಜು ಪೂಜಾರಿ ಅವರ ಕುಟುಂಬದ್ದು.

ಪತ್ನಿ ಹಾಗೂ ಎರಡು ಮಕ್ಕಳೊಂದಿಗೆ ಇನ್ನೇನು ಮುರಿದು ಬೀಳುತ್ತದೆ ಎನ್ನುವ ಮುರುಕಲು ಮನೆಯಲ್ಲಿ ಜೀವನ ನಡೆಸುತ್ತಿರುವ ರಾಜು ಪೂಜಾರಿ ಅವರಿಗೆ ಎರಡು ಕಣ್ಣುಗಳು ಸರಿಯಾಗಿ ಕಾಣಿಸುತ್ತಿಲ್ಲ. ಕೆಲಸ ಮಾಡಬೇಕು ಎನ್ನುವ ಸ್ವಾಭಿಮಾನದ ಹುಮ್ಮಸ್ಸಿದ್ದರೂ, ಆರೋಗ್ಯ ಸ್ಥಿತಿ ಅದಕ್ಕೆ ಅನುವು ಮಾಡಿಕೊಡುತ್ತಿಲ್ಲ. ಗಂಡನ ಮನೆಯಲ್ಲಿ ಜೀವನ ಕಟ್ಟಿಕೊಳ್ಳಬೇಕಾದ ಪುತ್ರಿ, ಪತಿಯ ಕಾರಣದಿಂದಾಗಿ ಪುಟ್ಟ ಮಗುವಿನೊಂದಿಗೆ ತವರು ಮನೆಯಲ್ಲಿ ಆಶ್ರಯಿಸಿದ್ದಾರೆ. ಐದು ಮಂದಿಯ ಸಂಸಾರದ ನೊಗ ಎಳೆಯಲು ಅಲ್ಲಿ-ಇಲ್ಲಿ ಬೇಡಿ, ಊರವರು ಕೊಟ್ಟ ಸಹಾಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಒಂದು ಸೂರು ಇರಲಿ ಎನ್ನುವ ಕಾರಣಕ್ಕಾಗಿ 25 ವರ್ಷಗಳ ಹಿಂದೆ ಕಟ್ಟಿಕೊಂಡ ಮನೆಯ ಜಾಗಕ್ಕೆ ಇನ್ನೂ ಹಕ್ಕುಪತ್ರವೇ ದೊರಕಿಲ್ಲ. 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ರಾಜು ಪೂಜಾರಿ ಅವರ ಹೇಳತೀರದಾಗಿದೆ. ಇಂದಲ್ಲ ನಾಳೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ನಮ್ಮ ಗೋಳು ಕೇಳುತ್ತಾರೆ, ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿಯೇ ಇರುವ ಈ ಬಡ ಕುಟುಂಬದ ನಿರೀಕ್ಷೆಗಳು ವರ್ಷದಿಂದ ವರ್ಷಕ್ಕೆ ಮುಂದುವರೆಯುತ್ತಿದ್ದರೂ, ಸಮಸ್ಯೆಗೆ ಪರಿಹಾರ ಮಾತ್ರ ಸಿಕಿಲ್ಲ.

ADVERTISEMENT

ಕಣ್ಣು ಕಾಣೋದಿಲ್ಲ, ಮಗನಿಗಿನ್ನು ಚಿಕ್ಕ ವಯಸ್ಸು, ಮಗಳಿಗೂ ಪತಿಯ ಆಶ್ರಯವಿಲ್ಲ ಎಂದು ಕಣ್ಣೀರಿಡುವ ರಾಜು ಪೂಜಾರಿ ಅವರು, ನಮ್ಮ ಕುಟುಂಬದ ಪರಿಸ್ಥಿತಿ ನೋಡಿ ಯಾರಾದರೂ ಸಹಾಯ ಮಾಡಿಯಾರು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಕುಟುಂಬದ ದೈನಂದಿನ ನಿರ್ವಹಣೆಯ ಜೊತೆ ಮನೆಯ ಸಮಸ್ಯೆಗೂ ಪರಿಹಾರ ದೊರಕಬೇಕಾದ ಈ ಬಡ ಕುಟುಂಬಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಹೃದಯಿ ಮನಸ್ಸುಗಳು ಸ್ಪಂದಿಸಿದ್ದಲ್ಲಿ ಸಮಸ್ಯೆಗೆ ಖಂಡಿತ ಪರಿಹಾರ ದೊರಕುತ್ತದೆ.

ರಾಜು ಪೂಜಾರಿ ಅವರ ಕುಟುಂಬಕ್ಕೆ ಸಹಾಯ ನೀಡುವವರು ಅವರ ಪತ್ನಿ ಜಲಜಾ ಪೂಜಾರ್ತಿ ಅವರ ಸಿದ್ದಾಪುರ ಕರ್ನಾಟಕ ಬ್ಯಾಂಕಿನ ಶಾಖೆಯ ಉಳಿತಾಯ ಖಾತೆ ಸಂಖ್ಯೆ 7062500101770401 ( ಐಎಫ್‌ಸಿ ಕೋಡ್: ಕೆಎಆರ್‌ಬಿ0000706 ಎಂಐಸಿಆರ್ ಕೋಡ್: 576052509) ಗೆ ನೆರವು ನೀಡಬಹುದು.

ರಾಜು ಪೂಜಾರಿ
6ವರ್ಷದ ಹಿಂದೆ ಅರ್ಜಿ ನೀಡಿದ್ದರೂ ಈವರೆಗೂ ಹಕ್ಕುಪತ್ರ ದೊರಕಿಲ್ಲ. ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಯಾವುದೇ ನೆರವು ದೊರಕಿಲ್ಲ
ರಾಜು ಪೂಜಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.