ADVERTISEMENT

ಕುಂದಾಪುರ | ‘ಸಣ್ಣ ಜಾತಿಗಳಿಗೂ ಸಮಾನ ಮೀಸಲಾತಿ ದೊರಕಲಿ’

ಕನ್ಯಾನದಲ್ಲಿ ಕೊಠಾರಿ ಸಮಾಜ ಸಭಾಭವನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 7:10 IST
Last Updated 26 ಮಾರ್ಚ್ 2023, 7:10 IST
ಕುಂದಾಪುರ ಸಮೀಪದ ಕನ್ಯಾನ ಗ್ರಾಮದ ಕರ್ಕಿಯಲ್ಲಿ ಕೊಠಾರಿ ಸಮಾಜ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಕೆ.ಜಯಪ್ರಕಾಶ ಹೆಗ್ಡೆ, ಕೆ.ಗೋಪಾಲ ಪೂಜಾರಿ, ಬಿ.ಅಪ್ಪಣ್ಣ ಹೆಗ್ಡೆ ಇದ್ದಾರೆ
ಕುಂದಾಪುರ ಸಮೀಪದ ಕನ್ಯಾನ ಗ್ರಾಮದ ಕರ್ಕಿಯಲ್ಲಿ ಕೊಠಾರಿ ಸಮಾಜ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಕೆ.ಜಯಪ್ರಕಾಶ ಹೆಗ್ಡೆ, ಕೆ.ಗೋಪಾಲ ಪೂಜಾರಿ, ಬಿ.ಅಪ್ಪಣ್ಣ ಹೆಗ್ಡೆ ಇದ್ದಾರೆ   

ಕುಂದಾಪುರ: ‘ಶೇ.15 ಮೀಸಲಾತಿ ಇರುವ ಪ್ರವರ್ಗ 2ರಲ್ಲಿ ಇರುವ ಪ್ರಬಲ ಸಮುದಾಯದವರೇ ಹೆಚ್ಚಿನ ಪ್ರಯೋಜನ ಪಡೆಯುತ್ತಿರುವುದರಿಂದ ಕಡಿಮೆ ಜನರಿರುವ ಕೊಠಾರಿ ಸಮುದಾಯದಂಥವರು ಮೀಸಲಾತಿಗಾಗಿ ಸ್ಪರ್ಧೆ ಮಾಡಬೇಕಾದ ಸ್ಥಿತಿ ಇದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ, ಕುಂದಾಪುರ ಇದರ ವತಿಯಿಂದ ಕನ್ಯಾನ ಗ್ರಾಮದ ಕರ್ಕಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನ ‘ಶ್ರೀ ಚೌಡೇಶ್ವರಿ ಕನ್ವೆನ್ಷನ್ ಹಾಲ್’ ಉದ್ಘಾಟಿಸಿ ಅವರು ಮಾತನಾಡಿದರು.

‘ಈವರೆಗೆ ಮೀಸಲಾತಿ ಪ್ರಯೋಜನ ಪಡೆದುಕೊಳ್ಳದ ಜಾತಿಗಳಿಗೆ ಶಿಕ್ಷಣ, ಉದ್ಯೋಗ ಮೀಸಲಾತಿಯಲ್ಲಿ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಮೀಸಲಾತಿ ಕೇಳುವುದಲ್ಲ, ಅಲ್ಲಿನ ಸಮಸ್ಯೆಗಳು ಏನು ಎಂದು ಅರ್ಥ ಮಾಡಿಕೊಂಡು‌ ಮುಂದಡಿ ಇಟ್ಟಾಗ ಮಾತ್ರ ಪ್ರಯೋಜನ ಸಿಗುತ್ತದೆ. ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಆದ್ಯತೆ ಸಿಗುವ ನಿಟ್ಟಿನಲ್ಲಿ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಬೇಕು’ ಎಂದು ಅವರು ಹೇಳಿದರು.

ADVERTISEMENT

ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ‘ಈ ದಿನ ಕೊಠಾರಿ ಸಮಾಜದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ಸಮುದಾಯ ಭವನ ಸಮಾಜದ ಆಸ್ತಿಯಾಗಲಿದೆ. ಇದಕ್ಕಾಗಿ ಶ್ರಮಿಸಿದವರು ಅಭಿನಂದನೀಯರು’ ಎಂದರು.

ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಸಭಾ ಭವನ, ಕಮಲಶಿಲೆ ದೇಗುಲದ ಅನುವಂಶೀಯ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಪಾಕ ಶಾಲೆ, ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಪೂಜಾರಿ ಗಣಕ ಯಂತ್ರ, ಕೊಲ್ಲೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ ವರನ ಗ್ರಹ, ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ವಧುವಿನ ಗ್ರಹ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಆಡಳಿತ ಕಚೇರಿ ಹಾಗೂ ಎನ್.ಮಂಜಯ್ಯ ಶೆಟ್ಟಿ ಬ್ಯಾಂಕ್ ಸೇಫ್ ಲಾಕರ್ ಉದ್ಘಾಟಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಹಾಗೂ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜೀವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಹಟ್ಟಿಯಂಗಡಿ ದೇಗುಲ ಧರ್ಮದರ್ಶಿ ಬಾಲಚಂದ್ರ ಭಟ್, ಕೂಡ್ಲು ಬಾಡಬೆಟ್ಟು ದೇಗುಲ ಮುಕ್ತೇಸರ ಜಯರಾಮ, ಕೊಠಾರಿ ವೇಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ನಾಗರಾಜ ಕೊಠಾರಿ ಆಜ್ರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಪಾರ್ವತಿ, ಕರ್ಕುಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಉದ್ಯಮಿಗಳಾದ ರಾಜು ಕೊಠಾರಿ ಆಜ್ರಿ, ಶಂಕರ ಕೊಠಾರಿ ಉಳ್ತೂರು, ವಾಸುದೇವ ಯಡಿಯಾಳ, ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರತಾಪ್ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಕೊಟ್ಟಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ಉದಯ ಕುಮಾರ್ ಶೆಟ್ಟಿ ಪಾಂಗಾಳ, ಚಂದ್ರಕಾಂತ ಶೆಟ್ಟಿ ಪಾಂಗಾಳ, ದಕ್ಷಿಣ ಕನ್ನಡ ಕೊಟ್ಟಾರಿ ಯುವ ಸಂಘದ ಅಧ್ಯಕ್ಷ ಚೇತನ್ ಕುಮಾರ್, ಅಪ್ಪು ಕೊಠಾರಿ, ಬಾಬು ಕೊಠಾರಿ, ಯುವ ಸಂಘಟನೆ ನಾಗೇಶ ಕೊಠಾರಿ ಮೊಳಹಳ್ಳಿ, ಮಹಿಳಾ ಸಂಘಟನೆ ಅಧ್ಯಕ್ಷೆ ಜಯಲಕ್ಷ್ಮಿ ಕೊಠಾರಿ ತಲ್ಲೂರು ಇದ್ದರು.

ಕುಂದಾಪುರ ಸೀತಾರಾಮ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗಪ್ಪ ಕೊಠಾರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.