ADVERTISEMENT

ಮಹಾರಾಷ್ಟ್ರದ ದೇವಗಡ ಸಮೀಪ ಮೀನುಗಾರಿಕಾ ಬೋಟ್‌ ಮುಳುಗಡೆ: ಏಳು ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 14:51 IST
Last Updated 9 ಏಪ್ರಿಲ್ 2019, 14:51 IST
ಮಹಾರಾಷ್ಟ್ರದ ದೇವಗಡ ಸಮೀಪ ಸೋಮವಾರ ತಡರಾತ್ರಿ ಮುಳುಗಡೆಯಾದ ಮಲ್ಪೆಯ ಮೀನುಗಾರಿಕಾ ಬೋಟ್‌.
ಮಹಾರಾಷ್ಟ್ರದ ದೇವಗಡ ಸಮೀಪ ಸೋಮವಾರ ತಡರಾತ್ರಿ ಮುಳುಗಡೆಯಾದ ಮಲ್ಪೆಯ ಮೀನುಗಾರಿಕಾ ಬೋಟ್‌.   

ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆ ತೆರಳಿದ ಬೋಟ್‌ವೊಂದು ಮಹಾರಾಷ್ಟ್ರದ ದೇವಗಡ ಸಮೀಪ ಸೋಮವಾರ ತಡರಾತ್ರಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಪಡುತೋನ್ಸೆ ಬೆಂಗ್ರೆ ಹೂಡೆಯ ದಿನೇಶ್‌ ತಿಂಗಳಾಯ ಎಂಬುವವರಿಗೆ ಸೇರಿದ ‘ಶಿವರಕ್ಷ’ ಹೆಸರಿನ ಆಳಸಮುದ್ರ ಸ್ಟೀಲ್‌ಬೋಟ್‌ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಭಟ್ಕಳದ ಮೀನುಗಾರರಾದ ಸುನೀಲ್‌ ಮಂಜುನಾಥ್‌, ಸುರೇಶ್‌ ಮಂಜುನಾಥ್‌, ಜಗನ್ನಾಥ ರಾಮ, ಪ್ರಶಾಂತ್‌ ಮೂಡಗಿ, ಗಜೇಂದ್ರ ಪಾಂಡುರಂಗ, ಕೃಷ್ಣ ಮೊಗೇರ, ಲೋಹಿತ್‌ ಧರ್ಮ ಅವರನ್ನು ರಕ್ಷಿಸಲಾಗಿದೆ.

ಎ. 6ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿದ ಬೋಟ್‌ ಮಹಾರಾಷ್ಟ್ರದ ರತ್ನಾಗಿರಿ ಸಮೀಪ ಸುಮಾರು 42 ಮಾರು ಅಳದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಈ ವೇಳೆ ಬೋಟಿನ ಅಡಿಭಾಗಕ್ಕೆ ಯಾವುದೋ ವಸ್ತು ಡಿಕ್ಕಿಯಾಗಿ ಬೋಟ್‌ನೊಳಗೆ ನೀರು ತುಂಬಿಕೊಂಡಿತು. ತಕ್ಷಣವೇ ಎಚ್ಚೆತ್ತುಕೊಂಡ ಮೀನುಗಾರರು ಸಮೀಪದಲ್ಲಿರುವ ಬೋಟ್‌ನವರಿಗೆ ಮಾಹಿತಿ ನೀಡಿದರು. ಕೂಡಲೇ ಘಟನಾ ಸ್ಥಳಕ್ಕಾಗಮಿಸಿದ ಶಿವತೇಜಸ್‌ ಬೋಟಿನವರು7 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

ADVERTISEMENT

ಆ ನಂತರ ಶಿವತೇಜಸ್‌, ವರಸಿದ್ದಿ, ಹನುಮ ಸಾನಿಧ್ಯ ಮತ್ತು ರಾಧಾಂಬಿಕ ಹೆಸರಿನ ಬೋಟ್‌ಗಳ ಸಹಾಯದಿಂದ ಮುಳುಗಡೆಯಾಗುತ್ತಿದ್ದ ಶಿವರಕ್ಷ ಬೋಟನ್ನು ಎಳೆದು ತರಲಾಯಿತು. ಆದರೆ ಸುಮಾರು 34ಮಾರು ಆಳದೂರದಲ್ಲಿ ದೇವಗಡ ಸಮೀಪ ಎಳೆದು ತರುತ್ತಿದ್ದಾಗ ಬೋಟ್‌ ಸಂಪೂರ್ಣ ಮುಳುಗಡೆಗೊಂಡಿತು ಎನ್ನಲಾಗಿದೆ. ಇದರಿಂದ ಬೋಟನಲ್ಲಿದ್ದ ೮ಸಾವಿರ ಲೀ. ಡಿಸೇಲ್‌, ಬಲೆ, ಜಿಪಿಎಸ್‌, ಹಿಡಿದ ಮೀನುಗಳು ಸೇರಿದಂತೆ ಒಟ್ಟು90 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.