ADVERTISEMENT

ಮೀನುಗಾರರು ಸುರಕ್ಷತೆಗೆ ಒತ್ತು ನೀಡಿ: ಲಕ್ಷ್ಮಿ ಹೆಬ್ಬಾಳಕರ

ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ ಕುರಿತ ಅರಿವು ಕಾರ್ಯಾಗಾರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:33 IST
Last Updated 15 ಆಗಸ್ಟ್ 2025, 5:33 IST
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮೀನುಗಾರರಿಗೆ ಜೀವ ರಕ್ಷಕ ಸಾಧನಗಳನ್ನು ವಿತರಿಸಿದರು
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮೀನುಗಾರರಿಗೆ ಜೀವ ರಕ್ಷಕ ಸಾಧನಗಳನ್ನು ವಿತರಿಸಿದರು   

ಉಡುಪಿ: ‘ನಿಮ್ಮ ಸುರಕ್ಷತೆ ನಿಮ್ಮ ಜವಾಬ್ದಾರಿ ಎಂದು ಅರಿತುಕೊಂಡು ಮೀನುಗಾರರು ಮೀನುಗಾರಿಕೆಗೆ ತೆರಳುವ ವೇಳೆ ತಪ್ಪದೆ ಜೀವ ರಕ್ಷಕ ಸಾಧನಗಳನ್ನು ಬಳಸಬೇಕು. ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲಿರುತ್ತದೆ, ಅವರನ್ನು ಅನಾಥರನ್ನಾಗಿಸಬೇಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಜಿಲ್ಲಾಡಳಿತ ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ‘ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ’ ಕುರಿತು ಗುರುವಾರ ಹಮ್ಮಿಕೊಂಡಿದ್ದ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೀನುಗಾರರು ಕಡಲಿನಲ್ಲಿ ಹಗಲು ರಾತ್ರಿ ಎನ್ನದೆ ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿದು ಕುಟುಂಬವನ್ನು ಸಾಕುವುದಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಹಲವು ಯೋಜನೆಗಳಡಿ ಮೀನುಗಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ ಎಂದು ಹೇಳಿದರು.

ADVERTISEMENT

ಮಳೆಗಾಲದ ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಮೀನುಗಾರರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ರಾಜ್ಯದ ವಂತಿಗೆಯನ್ನು ದ್ವಿಗುಣಗೊಳಿಸಲಾಗಿದೆ. ಮೀನುಗಾರರಿಗೆ ಪ್ರತಿ ವರ್ಷ ಜೀವರಕ್ಷಕ ಸಾಧನಗಳಾದ ಲೈಫ್‌ ಬಾಯ್‌ ಮತ್ತು ಲೈಫ್‌ ಜಾಕೆಟ್‌ಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.

ಕಳೆದ 5 ವರ್ಷಗಳಲ್ಲಿ ‌140 ಮೀನುಗಾರರು ಪ್ರಾಣ‌ ಕಳೆದುಕೊಂಡಿದ್ದಾರೆ. ಹವಾಮಾನ ಮುನ್ಸೂಚನೆ ಪಾಲಿಸಿ ಮೀನುಗಾರರು ಮೀನುಗಾರಿಕೆ ನಡೆಸಬೇಕು ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ‌ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು, ಉಡುಪಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ‌ರಮೇಶ್ ಕಾಂಚನ್, ರಾಜ್ಯ ಸಂಕಷ್ಟ ಪರಿಹಾರ ಸಮಿತಿ ಸದಸ್ಯ ಮದನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್‌, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಇದ್ದರು.

ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪಡೆ ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ಜೀವರಕ್ಷಕ ಸಾಧನಗಳನ್ನು ಬಳಸುವ ಬಗ್ಗೆ ಮೀನುಗಾರರಿಗೆ ತರಬೇತಿ ನೀಡಿದರು. ಮೀನುಗಾರರಿಗೆ ನಿವೇಶನ ಹಕ್ಕು ಪತ್ರ ಹಾಗೂ ಮನೆ ಮಂಜೂರಾತಿ ಹಕ್ಕು ಪತ್ರವನ್ನು ಕಾರ್ಯಕ್ರಮದಲ್ಲಿ ಸಚಿವೆ ವಿತರಿಸಿದರು. ‌ಜೊತೆಗೆ ಉಳಿತಾಯ ಪರಿಹಾರ ಯೋಜನೆಯಡಿ ಫಲಾನುಭವಿಗಳಿಗೆ ತಲಾ ಮೂರು ಸಾವಿರದಂತೆ ಚೆಕ್ ವಿತರಣೆ ನಡೆಯಿತು.‌

ರಾಜ್ಯದ ಆರ್ಥಿಕತೆಗೆ ಮೀನುಗಾರಿಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ರಾಜ್ಯ ಸರ್ಕಾರ ಮೀನುಗಾರರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಮೀನುಗಾರರ ಹಿತಾಸಕ್ತಿ ಕಾಪಾಡುತ್ತಿದೆ
ಲಕ್ಷ್ಮಿ ಹೆಬ್ಬಾಳಕರ್ ಜಿಲ್ಲಾ ಉಸ್ತುವಾರಿ ಸಚಿವೆ
ಮಳೆಗಾಲದಲ್ಲಿ ಅಳಿವೆ ಪ್ರದೇಶದಲ್ಲಿ ಹೆಚ್ಚಾಗಿ ದೋಣಿ ದುರಂತಗಳು ನಡೆಯುತ್ತಿವೆ. ಮೀನುಗಾರರಿಗೆ ಜೀವರಕ್ಷಕ ಸಾಧನಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ
ಸ್ವರೂಪ ಟಿ.ಕೆ. ಜಿಲ್ಲಾಧಿಕಾರಿ

‘ವಂಡ್ಸೆ ಗ್ರಾ.ಪಂ. ಕಾರ್ಯ ಶ್ಲಾಘನೀಯ’

ವಂಡ್ಸೆ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕೆಲಸಗಳ ಜೊತೆಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸಲು ಸಮುದಾಯ ಉಪಶಮನ ಆರೋಗ್ಯ ಉಪಕೇಂದ್ರವನ್ನು ತೆರೆಯುವುದರೊಂದಿಗೆ ಅಂಗವಿಕಲರು ಹಿರಿಯ ನಾಗರಿಕರು ಹಾಸಿಗೆ ಹಿಡಿದವರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ಇದರ ಸಮರ್ಪಕ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಾಗಿ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.