
ಉಡುಪಿ: ಮಹಾರಾಷ್ಟ್ರ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಗುಂಪು ಗುಂಪಾಗಿ ಕಂಡುಬರುವ ಫ್ಲೆಮಿಂಗೊ (ರಾಜಹಂಸ) ಹಕ್ಕಿಗಳು ಈಗ ಕರಾವಳಿಯಲ್ಲೂ ಅಪರೂಪಕ್ಕೆ ಕಂಡು ಬರುತ್ತಿರುವುದು ಪಕ್ಷಿ ವೀಕ್ಷಕರಲ್ಲಿ ಪುಳಕ ಉಂಟು ಮಾಡಿದೆ.
ಕೆಲ ತಿಂಗಳ ಹಿಂದೆ ಮಲ್ಪೆಯ ಫಿಶ್ ಮಿಲ್ಲೊಂದರ ಸಮೀಪದ ಕೊಳದಲ್ಲಿ ಒಂಟಿ ಲೆಸ್ಸರ್ ಫ್ಲೆಮಿಂಗೂ ಪಕ್ಷಿ ಕಂಡು ಬಂದಿತ್ತು. ಇದೀಗ ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ ಕೋಡಿಯ ಕಡಲ ತೀರದಲ್ಲಿ ಒಂಟಿ ಗ್ರೇಟರ್ ಫ್ಲೆಮಿಂಗೊ ಹಕ್ಕಿ ಕಾಣ ಸಿಕ್ಕಿದೆ.
ಫ್ಲೆಮಿಂಗೋ ಹಕ್ಕಿಗಳು ಒಂಟಿಯಾಗಿ ಕರಾವಳಿ ಪ್ರದೇಶದಲ್ಲಿ ಕಂಡು ಬರುತ್ತಿರುವುದು ಪಕ್ಷಿ ತಜ್ಞರಲ್ಲಿ ಅಚ್ಚರಿ ಉಂಟು ಮಾಡಿದೆ. ಈ ಪಕ್ಷಿಯನ್ನು ಕಾಣಲು ಪಕ್ಷಿ ವೀಕ್ಷಕರು ಸಾಸ್ತಾನದ ಕಡಲ ತೀರಕ್ಕೆ ತೆರಳುತ್ತಿದ್ದಾರೆ. ಕಡಲ ತೀರದ ಒಂದೇ ಜಾಗದಲ್ಲಿ ಕಳೆದ ಕೆಲವು ದಿನಗಳಿಂದ ಈ ಹಕ್ಕಿ ಕಾಣಸಿಗುತ್ತಿದೆ ಎಂದು ಪಕ್ಷಿ ವೀಕ್ಷಕರು ತಿಳಿಸಿದ್ದಾರೆ.
ಹೆಚ್ಚಾಗಿ ಹಿನ್ನೀರುಗಳಲ್ಲಿ ಕಾಣಸಿಗುವ ಫ್ಲೆಮಿಂಗೊ ಹಕ್ಕಿಗಳು ಪಾಚಿ ಮತ್ತು ಅದರಲ್ಲಿ ಅಡಗಿರುವ ಸೂಕ್ಷ್ಮ ಜೀವಿಗಳನ್ನು ತಿಂದು ಬದುಕುತ್ತವೆ. ಆದರೆ ಕಡಲ ತೀರದಲ್ಲಿ ಈ ಹಕ್ಕಿ ಕಂಡು ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಲ್ಪೆಯಲ್ಲಿ ಕಂಡುಬಂದಿದ್ದ ಲೆಸ್ಸರ್ ಫ್ಲೆಮಿಂಗೊ ಸುಮಾರು 15 ದಿನಗಳ ಕಾಲ ಕೊಳಚೆ ತುಂಬಿದ್ದ ಕೊಳದಲ್ಲಿ ಬೀಡು ಬಿಟ್ಟಿತ್ತು. ಇದು ಉಡುಪಿ ಪ್ರದೇಶದಲ್ಲಿ ಕಾಣಸಿಕ್ಕ ಮೊದಲ ಫ್ಲೆಮಿಂಗೊ ಎಂದು ಪಕ್ಷಿ ವೀಕ್ಷಕರ ಖುಷಿಪಟ್ಟಿದ್ದರು ಆದರೆ ಈ ಹಕ್ಕಿ ದುರಂತ ಅಂತ್ಯ ಕಂಡಿತ್ತು.
ಯಾರೋ ದುಷ್ಕರ್ಮಿಗಳು ಕಲ್ಲೆಸೆದು ಹಕ್ಕಿಯನ್ನು ಸಾಯಿಸಿದ್ದರು. ಮಲ್ಪೆಯಲ್ಲಿ ಕಂಡುಬಂದಿದ್ದ ಈ ಹಕ್ಕಿಯನ್ನು ನೋಡಲು ವಿವಿಧ ಕಡೆಯಿಂದ ಪಕ್ಷಿ ವೀಕ್ಷಕರು ಬಂದಿದ್ದರು. ಈಗ ಸಾಸ್ತಾನದಲ್ಲಿ ಕಂಡು ಬಂದಿರುವ ಫ್ಲೆಮಿಂಗೊ ಉಡುಪಿಯಲ್ಲಿ ಕಾಣಸಿಕ್ಕ ಎರಡನೇ ರಾಜಹಂಸ ಎಂದು ಹಿರಿಯ ಪಕ್ಷಿತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂಟಿ ಫ್ಲೆಮಿಂಗೊ ಗುಂಪಿನಿಂದ ಬೇರ್ಪಟ್ಟು ಕರಾವಳಿಯ ಕಡೆ ಬಂದಿರುವ ಸಾಧ್ಯತೆ ಇದೆ. ಇಲ್ಲಿ ಯಥೇಚ್ಛವಾಗಿ ಆಹಾರ ಸಿಕ್ಕಿರುವ ಕಾರಣ ಇಲ್ಲೇ ಬಿಡು ಬಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಗ್ರೇಟರ್ ಫ್ಲೆಮಿಂಗೊ ಹಕ್ಕಿಗಳು ಗುಜರಾತ್‌ನ ಕಚ್, ಒಡಿಶಾದ ಚಿಲ್ಕಾ ಸರೋವರಗಳಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
ಫ್ಲೆಮಿಂಗೊ ಹಕ್ಕಿಗಳು ವಲಸೆ ಹೋಗುವಾಗಲೂ ಗುಂಪು ಗುಂಪಾಗಿ ಹೋಗುತ್ತವೆ. ಆದರೆ ಸಾಸ್ತಾನದ ಸಮುದ್ರ ತೀರದಲ್ಲಿ ಒಂಟಿ ಹಕ್ಕಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆಗಣೇಶ್ ಪ್ರಸಾದ್ ಜಿ. ನಾಯಕ್ ಉಪನ್ಯಾಸಕರು ಮತ್ತು ಹಕ್ಕಿ ವೀಕ್ಷಕ
ಗುಂಪಿನಿಂದ ಬೇರ್ಪಟ್ಟಿರಬಹುದು
‘ನಾವು ಹಲವು ವರ್ಷಗಳಿಂದ ಪಕ್ಷಿ ವೀಕ್ಷಣೆ ಮಾಡುತ್ತಿದ್ದೇವೆ ಆದರೆ ಇದುವರೆಗೆ ಕರಾವಳಿಯಲ್ಲಿ ಫ್ಲೆಮಿಂಗೊ ಹಕ್ಕಿಗಳು ಕಂಡುಬಂದಿರುವ ಬಗ್ಗೆ ಮಾಹಿತಿ ಇಲ್ಲ. ಮಲ್ಪೆಯಲ್ಲಿ ಮತ್ತು ಸಾಸ್ತಾನದಲ್ಲಿ ಒಂಟಿ ಪ್ಲೆಮಿಂಗೊಗಳು ಕಂಡು ಬಂದಿರುವುದು ಖುಷಿ ನೀಡಿದೆ’ ಎಂದು ಪಕ್ಷಿ ತಜ್ಞ ವಿ.ಲಕ್ಷ್ಮೀನಾರಾಯಣ ಉಪಾಧ್ಯ ತಿಳಿಸಿದ್ದಾರೆ. ಫ್ಲೆಮಿಂಗೋಗಳು ಗುಂಪಿನಿಂದ ಬೇರ್ಪಟ್ಟು ಆಹಾರ ಹುಡುಕಿ ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ. ಮಹಾರಾಷ್ಟ್ರ ಗುಜರಾತ್ ಮೊದಲಾದ ಕಡೆ ಈ ಪ್ರಭೇದದ ಹಕ್ಕಿಗಳು ಸಂತಾನೋತ್ಪತ್ತಿ ಮಾಡುತ್ತವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.