ADVERTISEMENT

ಧಾವಂತದ ಬದುಕು: ಜಾನಪದ ಸಂಸ್ಕೃತಿಗೆ ಧಕ್ಕೆ: ಬಿ.ಆರ್. ವೆಂಕಟರಮಣ ಐತಾಳ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:06 IST
Last Updated 26 ಆಗಸ್ಟ್ 2025, 5:06 IST
ಭುವನೇಂದ್ರ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಿತು
ಭುವನೇಂದ್ರ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಿತು   

ಕಾರ್ಕಳ: ‘ಇಂದಿನ ಧಾವಂತ ಕಾಲದಲ್ಲಿ, ಜನ ಸಮುದಾಯದಲ್ಲಿ ಬೇರು ಬಿಟ್ಟು ಬೆಳೆದ ಜಾನಪದ ಸಂಸ್ಕೃತಿಗೆ ಬೆಲೆ ಇಲ್ಲದಂತಾಗಿದೆ’ ಎಂದು ಇಲ್ಲಿನ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್ ಹೇಳಿದರು.

ಇಲ್ಲಿನ ಭುವನೇಂದ್ರ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭುವನೇಂದ್ರ ಕಾಲೇಜು ಸಹಯೋಗದಲ್ಲಿ ಶನಿವಾರ ಆಯೋಜಿಸಲಾದ ಯುವ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣ, ಹೊಸ ಬಗೆಯ ಚಲನಚಿತ್ರ, ಜಾಹೀರಾತುಗಳು ಯುವ ಮನಸ್ಸುಗಳನ್ನು ಅರಳಿಸುವ ಬದಲು ಕೆರಳಿಸುವ ಕಾರ್ಯ ಮಾಡುತ್ತಿವೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಯುವ ಪೀಳಿಗೆ ಜಾನಪದಕ್ಕೆ ಸರಿಯಾದ ಸ್ಥಾನ ಕಲ್ಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಯುವಸೌರಭದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜಾನಪದ ಪ್ರಕಾರಗಳ ಕುರಿತು ಆಸಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಅಸ್ವಾದಿಸುವ ಮೂಲಕ ನಮ್ಮಲ್ಲಿ ಸಂಸ್ಕಾರ ಬೆಳೆಯುತ್ತದೆ. ಶಿಕ್ಷಣದೊಂದಿಗೆ ಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಂಸ್ಕಾರಯುತ ಶಿಕ್ಷಣ ಪಡೆಯಲು ಸಾಧ್ಯ. ಅಂಕ ಗಳಿಕೆಗೆ ಸೀಮಿತವಾಗದೆ ಕಲೆ, ಸಾಹಿತ್ಯ, ಸಂಸ್ಕೃತಿಯೊಂದಿಗೆ ವೈಜ್ಞಾನಿಕ, ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಮಾತನಾಡಿ, ಅನೇಕ ಜಾನಪದ ಕಲಾ ಪ್ರಕಾರಗಳು ನಶಿಸಿ ಹೋಗುತ್ತಿರುವುದು ಬೇಸರದ ಸಂಗತಿ. ಆ ನಿಟ್ಟಿನಲ್ಲಿ ಯುವ ಮನಸ್ಸುಗಳಲ್ಲಿ ಕಲೆ, ಸಾಹಿತ್ಯ, ನೈತಿಕ ಮೌಲ್ಯ ಬೆಳೆಸುವುದು ಶಿಕ್ಷಣ ಕ್ಷೇತ್ರಗಳ ಕರ್ತವ್ಯ. ಕಲೆ, ಸಾಹಿತ್ಯ, ಯಕ್ಷಗಾನ ಕಲಿಕೆ ವಿದ್ಯಾರ್ಥಿಗಳ ವ್ಯಕ್ತಿತ್ವ ಪರಿಪೂರ್ಣಗೊಳಿಸುತ್ತದೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಈಶ್ವರ್ ಭಟ್‌ ಭಾಗವಹಿಸಿದ್ದರು. ಯುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಾರ್ತಾ ಇಲಾಖೆಯಿಂದ ನಿವೃತ್ತರಾದ ಸಿಬ್ಬಂದಿ ಪ್ರೇಮಾನಂದ ರಾವ್ ದಂಪತಿಯನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ವಂದಿಸಿದರು.

ಭುವನೇಂದ್ರ ಕಾಲೇಜಿನ ವಿಕಾಸ್ ಮತ್ತು ಬಳಗದಿಂದ ಸುಗಮ ಸಂಗೀತ, ಪೂರ್ವಿ ಮತ್ತು ಬಳಗದಿಂದ ಜಾನಪದ ಗಾಯನ, ಕುಂದಾಪುರ ಶ್ರೀನೃತ್ಯ ವಸಂತ ನಾಟ್ಯಾಲಯದ ವಿದ್ಯಾರ್ಥಿಗಳಿಂದ ವಿದುಷಿ ಪ್ರವಿತಾ ಆಶೋಕ್ ನಿರ್ದೆಶನದ ಸಮೂಹ ನೃತ್ಯ, ಯಕ್ಷ ರಂಗಾಯದ ರೆಪರ್ಟರಿ ಕಲಾವಿದರಿಂದ ಹಾಲಕ್ಕಿ ಕುಣಿತ,  ಕೋಲಾಟ, ಬೈಕಾಡಿ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯಿಂದ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ‘ಮಾಯೆಯ ಬೆನ್ನೇರಿ’ ನಾಟಕ ಪ್ರದರ್ಶನಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.