ADVERTISEMENT

‘ವೈಜ್ಞಾನಿಕ ಕೃಷಿಯಿಂದ ಆರ್ಥಿಕ ಸ್ವಾವಲಂಬನೆ’

ಪೆರಂಪಳ್ಳಿಯಲ್ಲಿ ರೈತರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 12:44 IST
Last Updated 24 ಡಿಸೆಂಬರ್ 2022, 12:44 IST
ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ಪೆರಂಪಳ್ಳಿಯ ಅಂಬಡೆಬೆಟ್ಟುವಿನಲ್ಲಿ ಶುಕ್ರವಾರ ನಡೆದ ರೈತ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ಪೆರಂಪಳ್ಳಿಯ ಅಂಬಡೆಬೆಟ್ಟುವಿನಲ್ಲಿ ಶುಕ್ರವಾರ ನಡೆದ ರೈತ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.   

ಉಡುಪಿ: ಕೃಷಿಕರು ಮೊದಲು ಕೃಷಿಕರನ್ನು ಗೌರವಿಸಿದರೆ, ಕೃಷಿಯಲ್ಲಿ ಖುಷಿ ಸಿಗುತ್ತದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.

ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ಪೆರಂಪಳ್ಳಿಯ ಅಂಬಡೆಬೆಟ್ಟುವಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರ ಮಾದರಿಯಲ್ಲಿ ಸಹಕಾರ, ನೆರವಿನೊಂದಿಗೆ ರೈತರು ಕೃಷಿ ಮಾಡಬೇಕು. ಕೃಷಿಯಲ್ಲಿ ವೈಜ್ಞಾನಿಕ ಕೃಷಿಗೆ ಆದ್ಯತೆ ಸಿಗಬೇಕು. ಇದರಿಂದ ರೈತ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ರಘುಪತಿ ಭಟ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿಯಲ್ಲಿ ಕೃಷಿ ಭೂಮಿಯನ್ನು ಉಳುಮೆ ಮಾಡದೆ ಹಡಿಲು ಬಿಡುತ್ತಿರುವುದು ಹೆಚ್ಚಾಗಿದೆ. ಕೃಷಿ ಭೂಮಿ ಹಡಿಲು ಬಿಡುವುದು ಕಾನೂನಿನ ಪ್ರಕಾರ ಅಪರಾಧವೂ ಹೌದು. ಬೀಳುಬಿಟ್ಟ ಭೂಮಿಯ ಮಾಲೀಕರಿಗೆ ಸರ್ಕಾರ ನೋಟೀಸ್‌ ನೀಡಿ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಜಿಲ್ಲೆಗೆ ಒಟ್ಟು ಬೇಡಿಕೆ ಅಕ್ಕಿಯ ಪೈಕಿ ಶೇ 60ರಷ್ಟು ನೆರೆಯ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವುದು, ಹಡಿಲು ಭೂಮಿ ಪ್ರಮಾಣ ಏರಿಕೆಯಾಗುತ್ತಿರುವುದು ಇಂದಿನ ಪರಿಸ್ಥಿತಿಗೆ ಕಾರಣ. ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತ ಉತ್ಪಾದಕ ಕಂಪೆನಿಗಳನ್ನು ಆರಂಭಿಸಲು ಕೃಷಿಕರು ಮುಂದಾದರೆ ಸರ್ಕಾರದಿಂದ ಅಗತ್ಯ ಸಹಕಾರ ಕೊಡಿಸಲು ಬದ್ಧ ಎಂದು ಶಾಸಕ ರಘುಪತಿ ಭಟ್‌ ಭರವಸೆ ನೀಡಿದರು.

ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶ್ರೀನಿವಾಸ್ ಬಲ್ಲಾಳ್, ಫೆಡ್ರಿಕ್ ಡಿಸೋಜಾ, ಪಿ.ಎನ್. ಶಶಿಧರ ರಾವ್, ಶಂಕರ ಕೋಟ್ಯಾನ್, ಅಂತಪ್ಪ ಪೂಜಾರಿ, ಹರಿಕೃಷ್ಣ ಶಿವತ್ತಾಯ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಆಲಿಸ್ ಡಿಸೋಜಾ. ನಗರಸಭಾ ನಾಮ ನಿರ್ದೇಶಿತ ಸದಸ್ಯೆ ಅರುಣಾ ಸುಧಾಮ ವೇದಿಕೆಯಲ್ಲಿ ಇದ್ದರು.

ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವ ಸುಶೀಲ ಪೂಜಾರಿ, ಗಿರಿಜಾ ಅಕ್ಕಮ ಪೂಜಾರಿ, ಬೆನೆಡಿಕ್ಟ್ ಡಿಸೋಜಾ, ಗಿರಿಜಾ ಪೂಜಾರಿ, ಯಶೋದಾ ಪೂಜಾರಿ ನಡುತೋಟ, ಹೆನ್ರಿ ಡಿಸೋಜಾ ಮತ್ತು ಹೈನುಗಾರಿಕೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪಿ.ಕಮಲ, ಅವರನ್ನು ಸನ್ಮಾನಿಸಲಾಯಿತು.

ವಡಭಾಂಡೇಶ್ವರ ವಾರ್ಡ್‌ನ ನಗರಸಭಾ ಸದಸ್ಯ ಯೋಗಿಶ್, ಮರಿಯಾ ಡಿಸೋಜಾ, ಜೂಲಿಯಾನ್ ದಾಂತಿ, ಹೇಮಾ ವಿಜಯ್, ಜಯಂತಿ ಶಂಕರ್, ಶಾಂತಿ ಡಿಸೋಜಾ, ಪೌಸ್ತಿನ್ ಡಿಸೋಜಾ, ಆನಂದ್‌ ಜತ್ತನ್ ಹಿರಿಯಡ್ಕ, ರಾಫೇಲ್ ಡಿಸೋಜಾ, ಮಧುರ ಕರಂಬಳ್ಳಿ, ರಾಜೇಶ್, ಜಯಕುಮಾರ್ ಸಾಲ್ಯಾನ್ ಶೀಂಬ್ರ, ಚೆಲುವರಾಜ್ ಪೆರಂಪಳ್ಳಿ, ಕೃಷಿಕ ಸಮಾಜದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಇದ್ದರು.

ಸುಬ್ರಹ್ಮಣ್ಯ ಶ್ರೀಯಾನ್ ಕಾರ್ಯಕ್ರಮ ನಿರ್ವಹಿಸಿದರು. ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.