ಕಾರ್ಕಳ: ನಂದಳಿಕೆ ಅಬ್ಬನಡ್ಕ ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ರಜತ ವರ್ಷಾಚರಣೆಯ ಸಮಾರೋಪದ ಪ್ರಯುಕ್ತ ಬೋಳ ಮೈಂದ್ಕಲ್ ಸುಮತಿ ಕೊರಗ ಮೂಲ್ಯ ಬಡ ದಂಪತಿಗೆ ₹7 ಲಕ್ಷ ವೆಚ್ಚದ ನೂತನ ಮನೆ ಹಸ್ತಾಂತರ ಮಾಡಲಾಯಿತು.
ಸಂಘದ ಗೃಹ ನಿರ್ಮಾಣ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಸಂಸ್ಥೆ, ದಾನಿಗಳ ಸಹಕಾರದಲ್ಲಿ ಮುತುವರ್ಜಿಯಿಂದ ಮನೆ ನಿರ್ಮಾಣ ಪೂರ್ಣಗೊಳಿಸಿತು.
ಗೃಹ ಪ್ರವೇಶದ ಪ್ರಯುಕ್ತ ಧಾರ್ಮಿಕ ಪೂಜೆ, ಭಜನಾ ಮಂಡಳಿಯವರ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.
ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಮನೆಯ ನಾಮ ಫಲಕ ಅನಾವರಣಗೊಳಿಸಿ, ಶುಭಹಾರೈಸಿದರು.
ಮುನಿಯಾಲು ಉದಯ ಕೃಷ್ಣಯ್ಯ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ‘ಸಾಮಾಜಿಕ ಸೇವಾ ಕಾರ್ಯದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡುವ ಏಕೈಕ ಸಂಸ್ಥೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್’ ಎಂದರು.
ಅಬ್ಬನಡ್ಕ ಸೇವಾ ಯೋಜನಾ ಸಮಿತಿಯ ಅಧ್ಯಕ್ಷ ಪ್ರೇಮ್ ಕುಲಾಲ್ ಇನ್ನಾ, ಮನೆಯ ಕೀಲಿ ಕೈ ಹಸ್ತಾಂತರಿಸಿದರು. ನಂದಳಿಕೆ ಪಾರ್ಲ ಸುಬ್ರಹ್ಮಣ್ಯ ಭಟ್ ಆಶೀರ್ವದಿಸಿದರು. ಬೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋಳ ದಿನೇಶ್ ಅಂಚನ್, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ವಿಶ್ವನಾಥ್ ಪಾಟ್ಕರ್, ಉದ್ಯಮಿ ದೀಪಕ್ ಕೋಟ್ಯಾನ್ ಇನ್ನಾ, ಉದಯ ಶೆಟ್ಟಿ, ಅರುಣ್ ಕುಮಾರ್ ನಿಟ್ಟೆ, ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಪುಷ್ಪಾಸತೀಶ್ ಪೂಜಾರಿ, ಯೋಗೀಶ್ ಆಚಾರ್ಯ ಇನ್ನಾ, ರಘುವೀರ್ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಕುಲಾಲ್ ಇನ್ನಾ, ಸುಮತಿ ಕೊರಗ ಮೂಲ್ಯ ಇದ್ದರು.
ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಸಂದೀಪ್ ವಿ. ಪೂಜಾರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.