ADVERTISEMENT

ಜಿಲ್ಲಾ ಗಮಕ ಸಮ್ಮೇಳನ 29ರಂದು

ಜಿಲ್ಲಾ ಗಮಕ ಕಲಾ ಸಮ್ಮೇಳನದ ಅಧ್ಯಕ್ಷರಾಗಿ ಚಂದ್ರಶೇಖರ ಕೆದ್ಲಾಯ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:33 IST
Last Updated 25 ಫೆಬ್ರುವರಿ 2020, 12:33 IST

ಉಡುಪಿ: ಕರ್ನಾಟಕ ಗಮಕ ಕಲಾ ಪರಿಷತ್ತು, ಜಿಲ್ಲಾ ಗಮಕ ಕಲಾ ಪರಿಷತ್ತು ವತಿಯಿಂದ ಫೆ.29ರಂದು ಬೆಳಿಗ್ಗೆ 9.30ಕ್ಕೆ ನಗರದ ಪೂರ್ಣಪ್ರಜ್ಞ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಮಕ ಕಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ.ಎಂ.ಎಲ್‌.ಸಾಮಗ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಗಮಕ ಕಲಾ ಸಮ್ಮೇಳನದ ಅಧ್ಯಕ್ಷರಾಗಿ ಗಮಕಿ ಚಂದ್ರಶೇಖರ ಕೆದ್ಲಾಯ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಅದಮಾರು ಮಠದ ಶಿಕ್ಷಣ ಮಂಡಳಿತ ಅಧ್ಯಕ್ಷ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಗಂಗಮ್ಮ ಕೇಶವಮೂರ್ತಿ, ಡಾ.ಎಚ್‌.ಆರ್‌. ವಾಸುದೇವ ಹೊಸಹಳ್ಳಿ, ಬೆಳಗೋಡು ರಮೇಶ್‌ ಭಟ್‌, ಡಾ.ಜಿ.ಚಂದ್ರಶೇಖರ್‌, ಪ್ರದೀಪ್ ಕುಮಾರ್ ಭಾಗವಹಿಸಿದ್ದಾರೆ ಎಂದು ಹೇಳಿದರು.

ಗಮಕ ಕಲೆಯ ಇತಿಹಾಸ, ಕಲೆ ಮತ್ತು ಪುರಾಣ ಜ್ಞಾನ, ಗಮಕ ಕಲೆಯ ಭವಿಷ್ಯ, ವ್ಯಾಖ್ಯಾನಕಾರನ ವಿಷಯಜ್ಞಾನ, ಔಚಿತ್ಯಪ್ರಜ್ಞೆ, ಗಮಕ ವೈವಿಧ್ಯ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಡಾ.ಎ.ವಿ.ಪ್ರಸನ್ನ, ತೆಕ್ಕೆಕೆರೆ ಸುಬ್ರಹ್ಮನ್ಯ ಭಟ್‌, ಸರ್ಪಂಗಳ ಈಶ್ವರ ಭಟ್‌, ಗಣಪತಿ ಕುಳಮರ್ವ, ಪ್ರೊ.ಅರವಿಂದ್ ಹೆಬ್ಬಾರ್, ಡಾ.ರಾಘವೇಂದ್ರ ರಾವ್ ಪಡುಬಿದ್ರಿ, ಮಂಜುಳಾ ಸುಬ್ರಹ್ಮಣ್ಯ ಉಪನ್ಯಾಸ ನೀಡಲಿದ್ದಾರೆ.

ADVERTISEMENT

ಸಂಜೆ ಸಮಾರೋಪದಲ್ಲಿ ಮಾಹೆ ಆಡಳಿತಾಧಿಕಾರಿ ಡಾ.ಎಚ್‌.ಶಾಂತಾರಾಮ್‌, ಹರಿಕೃಷ್ಣ ಪುನರೂರು, ಡಾ.ಜಿ.ಶಂಕರ್, ನೀಲಾವರ ಸುರೇಂದ್ರ ಅಡಿಗ, ಆನಂದ್ ಸಿ.ಕುಂದರ್ ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕ ಶಿಕ್ಷಕಿಯರಿಗೆ ಒಒಡಿ ಸೌಲಭ್ಯ ಇರುತ್ತದೆ. ಗಮಕಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರೊ.ಎಂ.ಎಲ್‌.ಸಾಮಗ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.