ಉಡುಪಿ: ಅರಿವಿನಲ್ಲಿ ಸೌಹಾರ್ದತೆ ಮೂಡಲಿದ್ದು, ಪರಸ್ಪರ ಒಗ್ಗಟ್ಟಿನೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಲು ಸಾದ್ಯವಿದೆ ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.
ಉಡುಪಿಯ ಹಾಜಿ ಅಬ್ದುಲ್ಲ ಚಾರಿಟೇಬಲ್ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆ ವತಿಯಿಂದ ಸೋಮವಾರ ಜಿಲ್ಲಾ ಗ್ರಂಥಾಲಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ, ಶಾಂತಿ ನಡೆ ಹಾಗೂ ವಿಚಾರಧಾರೆ ಕಾರ್ಯಕ್ರಮದಲ್ಲಿ ಪ್ರಸಕ್ತ ಸಮಾಜದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಕುರಿತು ಮಾತನಾಡಿದರು.
ಜನಾಂಗ ದ್ವೇಷ ಜಗತ್ತಿನ ಎಲ್ಲ ಕಡೆಗಳಲ್ಲಿಯೂ ಇದ್ದು, ಜನಾಂಗೀಯ ಕಲಹದಿಂದ ನಾಗರಿಕತೆಗಳೇ ಸರ್ವನಾಶವಾಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಭಾರತದಲ್ಲಿ ನಾಗರಿಕತೆ ಉಳಿಯಬೇಕಾದರೆ ಜನಾಂಗೀಯ ಕಲಹಗಳು ನಡೆಯದಂತೆ ಎಚ್ಚರವಹಿಸಬೇಕು ಎಂದರು.
ಉಡುಪಿ ಕಾರ್ಪೊರೇಶನ್ ಬ್ಯಾಂಕ್ ಮ್ಯೂಸಿಯಂನಲ್ಲಿರುವ ಹಾಜಿ ಅಬ್ದುಲ್ಲಾರ ಪ್ರತಿಮೆಗೆ ಟ್ರಸ್ಟ್‌ನ ವಿಶ್ವಸ್ಥ ಸಿರಾಜ್ ಅಹ್ಮದ್ ಮಾಲಾರ್ಪಣೆ ಮಾಡುವ ಮೂಲಕ ಶಾಂತಿ ನಡಿಗೆಗೆ ಚಾಲನೆ ನೀಡಿದರು.
ಯೂನಿಯನ್ ಬ್ಯಾಂಕಿನ ಡಿಜಿಎಂ ಡಾ.ಎಚ್.ಟಿ. ವಾಸಪ್ಪ, ಟ್ರಸ್ಟ್ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಹಾಜಿ ಅಬ್ದುಲ್ಲಾರ ಕುರಿತು ಮಾತನಾಡಿದರು.
ಹಾಜಿ ಅಬ್ದುಲ್ಲಾರ ಮನೆಯಿಂದ ಹೊರಟ ನಡಿಗೆ ಕೆ.ಎಂ ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ಗ್ರಂಥಾಲಯದಲ್ಲಿ ಸಮಾಪನಗೊಂಡಿತು. ಗಾಂಧಿವಾದಿ ರಾಜಗೋಪಾಲ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಚಿಂತಕ ಪ್ರೊ.ಫಣಿರಾಜ್, ಪ್ರೊ.ಹಯವದನ ಉಪಾಧ್ಯಾಯ, ಹುಸೇನ್ ಕೋಡಿಬೆಂಗ್ರೆ, ಬಾಲಕೃಷ್ಣ ಶೆಟ್ಟಿ, ಸೌಜನ್ಯ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.