ADVERTISEMENT

ಬಾಲಕಿಯ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 16:25 IST
Last Updated 10 ಆಗಸ್ಟ್ 2022, 16:25 IST

ಬೈಂದೂರು: ಸೋಮವಾರ ಮಧ್ಯಾಹ್ನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಕಾಲುಸಂಕದ ಮೂಲಕ ಹಳ್ಳ ದಾಟುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ಬಾಲಕಿ ಸನ್ನಿಧಿಯ (7) ಮೃತದೇಹ ಬುಧವಾರ ಸಂಜೆ ದೊರೆತಿದೆ. ಸೋಮವಾರ ಸಂಜೆಯಿಂದಲೇ ಹುಡುಕಾಟ ಆರಂಭಿಸಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆ ಮುಳುಗು ತಜ್ಞರು ಹರಸಾಹಸಪಟ್ಟರೂ ಮಂಗಳವಾರ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ.

ಬುಧವಾರ ಸುಮಾರು 200ಕ್ಕೂ ಅಧಿಕ ಮೀನುಗಾರರು ವಿವಿಧ ತಂಡಗಳಲ್ಲಿ ಹುಡುಕಾಟ ನಡೆಸಿದರು. ಸಂಜೆಯ ವೇಳೆಗೆ ಕಾಲುಸಂಕದಿಂದ ಕೆಳಕ್ಕೆ ಸುಮಾರು 500ಮೀ.ನಷ್ಟು ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ದೊರೆತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಬೈಂದೂರು ಪೋಲೀಸರ ನೆರವಿನೊಂದಿಗೆ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಂಡರು. ಬಾಲಕಿಯ ಮನೆಯಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಊರು ಸೂತಕದಲ್ಲಿ ಮುಳುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT